ಮೂಗಿನಿಂದ ಮತ್ತು ನಾಲಗೆಯಿಂದ ಅನುಕ್ರಮವಾಗಿ ಅನುಭವಕ್ಕೆ ಬರುವ ವಸ್ತುಗುಣಗಳು. ವಾಸನೆಗೂ ರುಚಿಗೂ ನಿಕಟ ಸಂಬಂದ ಉಂಟು. ಆದರೆ ನಮಗೆ ಆಹಾರದ ಪುರ್ಣವಾದ ಮತ್ತು ಆನಂದದಾಯಕ ಅನುಭವ ಪಡೆಯಲು ಕೇವಲ ಘ್ರಾಣ ರುಚಿಗಳೆರಡೇ ಸಾಲವು. ಜೊತೆಗೆ ನೋಟ ಶಬ್ದಗಳ ಅರಿವು ಸಹ ಬೇಕು. ಸುಗಂಧದ್ರವ್ಯಗಳ ಇಂದ್ರಿಯಾನುಭವದಲ್ಲಿ ಘ್ರಾಣಾಂಶ ಪ್ರಮುಖ. ಕೆಲವು ವಸ್ತುಗಳ ಘ್ರಾಣಾನುಭವಕ್ಕೆ ಸ್ವರ್ಶಾಂಶವೂ ಅಗತ್ಯ. ಇನ್ನೂ ವಿಚಿತ್ರವೆಂದರೆ ಹಿಂದೆಂದೂ ರುಚಿ ಅನುಭವವಿಲ್ಲದ ಪ್ರಬಲರುಚಿ ಇಲ್ಲದ ಒಂದು ರಾಸಾಯನಿಕ ವಸ್ತುವನ್ನು ಮೊದಲ ಬಾರಿ ರುಚಿ ನೋಡಿದರೆ, ಆ ವಸ್ತುವಿನ ರುಚಿ ಇಂಥದ್ದೇ ಎಂದು ಹೇಳಲು ಕಷ್ಟವಾದೀತು. ವಸ್ತುವಿನ ರಾಸಾಯನಿಕ ರಚನೆಗೂ ರುಚಿಗೂ ಸಂಬಂಧ ಉಂಟು ಎಂದು ತಿಳಿದಿದ್ದರೂ ರುಚಿಯ ಸಂಪುರ್ಣ ರಾಸಾಯನಿಕ ಹಿನ್ನೆಲೆ ಮಾತ್ರ ಅರ್ಥವಾಗಿಲ್ಲ. ಇದೇ ಘ್ರಾಣಕ್ಕೂ ಅನ್ವಯಿಸುತ್ತದೆ. ನಮ್ಮ ಘ್ರಾಣ ನರತಂತುಗಳ ತುತ್ತತುದಿಯ ಅಂಗಗಳಲ್ಲಿ ಪ್ರಾರಂಭವಾಗುತ್ತದೆ. ಲವಂಗ ಮತ್ತು ಮೆಣಸು ರುಚಿಯೊಂದಿಗೆ ಉರಿಯನ್ನೂ ಉಂಟು ಮಾಡುತ್ತವೆ. ಉರಿ ರುಚಿಗೆ ಸೇರಿದ್ದಲ್ಲ. ಉಪ್ಪು, ಹುಳಿ, ಸಿಹಿ ಮತ್ತು ಕಹಿಗಳು ರುಚಿಗೆ ಸೇರಿದ್ದು. ಉರಿಯಾದರೋ ರಾಸಾಯನಿಕ ಪ್ರಚೋದಿತ. ವಾಸನೆ ಮತ್ತು ರುಚಿಗಳಿಗೆ ರಾಸಾಯನಿಕ ಹಿನ್ನೆಲೆ ಯಿರುವುದರಿಂದಲೇ ಕೆಳದರ್ಜೆಯ ಜೀವಿಗಳು ತಮಗೆ ಹಿತವಾದ ಪದಾರ್ಥಗಳನ್ನು ಅಂಗೀಕರಿಸಲು ಮತ್ತು ಅಹಿತವಾದವನ್ನು ತ್ಯಜಿಸಲು ಸಾಧ್ಯವಾಗುತ್ತದೆ. 

ಘ್ರಾಣ : ಸಸ್ತನಿಗಳಲ್ಲಿ ಘ್ರಾಣಗ್ರಾಹಿಕೋಶಗಳು (ಆಲ್ಫ್ಯಾಕ್ಟರಿ ಸೆಲ್ ರಿಸೆಪ್ಟರ್ಸ್) ಮೂಗಿನ ಹೊಳ್ಳೆಗಳ ಮೇಲ್ಭಾಗದಲ್ಲಿ ಅಡಕವಾಗಿವೆ. ಇವು ಘ್ರಾಣ ಪೊರೆಯಲ್ಲಿ ಸುಮಾರು 2-5 ಚದರ ಸೆಂಟಿಮೀಟರಿನಷ್ಟು ಕ್ಷೇತ್ರದ ಮಚ್ಚಿಗಳಲ್ಲಿವೆ.

ಘ್ರಾಣಗ್ರಾಹಿಕೋಶಗಳು ನೀಳವಾಗಿ ತೆಳ್ಳಗಿವೆ. ಇವುಗಳ ತುದಿಗಳಿಂದ, ಸೂಕ್ಷ್ಮ ಕೂದಲಂತಿರುವ ಅನೇಕ ಎಳೆಗಳು. ಮೂಗಿನ ಲೋಳೆಪೊರೆಯಿಂದ ಹಾದು ಹೊರ ಚಾಚುತ್ತವೆ. ಈ ಕೋಶವನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ನೋಡಿದರೆ ಪ್ರತಿ ಕೋಶದಲ್ಲೂ ಸುಮಾರು ನೂರಾರು ಎಳೆಗಳು ಇರುವುದನ್ನು ಕಾಣಬಹುದು. ಈ ಕೋಶಗಳ ಮತ್ತೊಂದು ತುದಿ ಮೊನಚಾಗಿ ಕಡೆಗೆ ನರತಂತುವಾಗಿ ಮಾರ್ಪಟ್ಟು, ಇದೇ ರೀತಿ ಇತರ ಘ್ರಾಣಗ್ರಾಹಿ ಕೋಶಗಳಿಂದ ಹೊರಡುವ ನರತಂತುಗಳೊಂದಿಗೆ ಘ್ರಾಣನರವಾಗಿ ಘ್ರಾಣಮುಕುಲವನ್ನು (ಆಲ್ಫ್ಯಾಕ್ಟರಿ ಬಲ್ಬ್) ಸೇರುತ್ತವೆ. ಮಿದುಳಿನ ನೇರಸಂಪರ್ಕವಿರುವ ನರಗಳಲ್ಲಿ ಒಂದಾದ ಟ್ರೈಜಮೈನಲ್ ನರದ ತಂತುಗಳು ಸಹ ಮೂಗಿನ ಹೊಳ್ಳೆ ಹಾಗೂ ಘ್ರಾಣಕ್ಷೇತ್ರದಲ್ಲಿ ಹರಡಿ ಉರಿಯ ಪ್ರಚೋದನೆಯಲ್ಲಿ ಭಾಗವಹಿಸುತ್ತವೆ. ಅತ್ಯಲ್ಪ ವಾಸನೆ ಇಲ್ಲವೇ ಕಿರುಕುಳ ಕೊಡುವಷ್ಟು ಉದ್ರೇಕಿಸುವ ವಾಸನೆಗಳು ಕೂಡ ಟ್ರೈಜಮೈನಲ್ ನರತಂತುಗಳ ಹಾಗೂ ಘ್ರಾಣನರತಂತುಗಳ ತುತ್ತತುದಿಯ ಅಂಗಗಳನ್ನು ಪ್ರಚೋದಿಸುತ್ತವೆ. ವಾಸನೆ ಬೀರುವ ಪದಾರ್ಥದ ಅಣುಗಳು ನಾವು ಸಾಧಾರಣವಾಗಿ ಉಸಿರಾಡುವಾಗ ಉತ್ಪತ್ತಿಯಾಗುವ ವಾಯುಸುಳಿಗಳಲ್ಲಿ ಸಿಕ್ಕು ಘ್ರಾಣಕ್ಷೇತ್ರಕ್ಕೆ ಅಪ್ಪಳಿಸುತ್ತವೆ. ಅಣುಗಳು ತುತ್ತತುದಿಯ ಅಂಗಗಳನ್ನು ಮುಟ್ಟಿದ ಕೂಡಲೆ ಅಲ್ಲಿ ಅಲ್ಪ ವಿದ್ಯುತ್ ಪ್ರವಾಹ ಹುಟ್ಟುತ್ತದೆ. ಇದನ್ನು ನರಗಳ ಕಂತೆ ಮಿದುಳಿನಲ್ಲಿರುವ ಘ್ರಾಣಕೇಂದ್ರಕ್ಕೆ ತತ್ಕ್ಷಣ ಸಾಗಿಸುತ್ತದೆ. ಈ ಕೇಂದ್ರ ವಿದ್ಯುತ್ ಪ್ರವಾಹವನ್ನು ವಿಘಟಿಸಿ ವಿವಿಧ ವಾಸನೆಗಳಾಗಿ ಗುರುತಿಸುವುದು. 

ಕೀಟಗಳಲ್ಲಿ ಗ್ರಾಹಕ ತಂತುಗಳೇ (ಆಂಟೆನ) ಪ್ರಮುಖ ಘ್ರಾಣೇಂದ್ರಿಯ. ದವಡೆ ತುಟಿಗಳ ಸ್ಪರ್ಶಾಂಗಗಳ ನರತಂತುಗಳ ಕೊನೆಯಲ್ಲೂ ಘ್ರಾಣಗ್ರಾಹಿಗಳು ಇರಬಹುದು. ಕೆಲವು ಕೀಟಗಳಲ್ಲಿ ಘ್ರಾಣೇಂದ್ರಿಯ ಚಪ್ಪಟೆಯಾದ ಒಂದರಿಯಂತೆ ಇನ್ನು ಕೆಲವಲ್ಲಿ ಬೆಣೆಯಂತಿರುವ ಸೂಕ್ಷ್ಮ ಕೂದಲಿನ ಎಳೆಯಂತೆ ಕಾಣುತ್ತವೆ. ಈ ಬೆಣೆಗಳ ಮೇಲುಹೊದಿಕೆ (ಕ್ಯೂಟಿಕಲ್) ಕೇವಲ 1/1000 ಮಿಲಿಮೀಟರಿನಷ್ಟು ತೆಳುವಾಗಿದೆ. ಅದರ ಇಕ್ಕಡೆಗಳಲ್ಲೂ ಬಹುತೇಕ ನರತಂತುಗಳುಳ್ಳ ಕೋಶಗಳಿವೆ. ಆದ್ದರಿಂದ ನರಮಂಡಲಕ್ಕೂ ಹೊರಗೆ ಬೀರುವ ವಾಸನೆಗೂ ಮಧ್ಯೆ ಘ್ರಾಣೇಂದ್ರಿಯದ ನಿರ್ಜೀವ ಹೊದಿಕೆ (ಕ್ಯೂಟಿಕಲ್) ಅಡ್ಡ ಉಂಟು. ಈ ಹೊದಿಕೆಯಿಂದ ಲೋಳೆ ಅಥವಾ ಇತರ ಯಾವ ರೀತಿಯ ಸ್ರಾವವೂ ಸ್ರವಿಸುವುದಿಲ್ಲ. ಆದರೂ ವಾಸನೆಗೆ ಅಡ್ಡತಡೆಗಳಿಲ್ಲ. ವಾಸನೆಯ ಅಣುಗಳು ಘ್ರಾಣನರತಂತುಗಳನ್ನು ನೇರವಾಗಿ ಪ್ರಚೋದಿಸುತ್ತವೆ. ಅವು ದ್ರವರೂಪದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂಬ ವಾದಕ್ಕೆ ಈ ಮೇಲಿನ ಪ್ರಾಯೋಗಿಕ ಅಧ್ಯಯನವೇ ಆಧಾರವೆಂದು ಕೆಲವರ ಅಭಿಪ್ರಾಯ. ಮನುಷ್ಯನಿಗೂ ಅಕಶೇರುಕ ಪ್ರಾಣಿವರ್ಗಕ್ಕೂ ರಚನೆಯಲ್ಲಿ ಅನೇಕಾನೇಕ ವ್ಯತ್ಯಾಸಗಳಿವೆ. ಆದರೂ ಮನುಷ್ಯ ಹಾಗೂ ಕೀಟಗಳಲ್ಲಿ ವಾಸನಾ ಪ್ರಚೋದನೆಯ ಕ್ರಿಯೆ ಬಹುತೇಕ ಒಂದೇ ಎಂದು ಹೇಳಲಾಗಿದೆ. ಕೀಟಗಳ ಮೇಲೆ ನಡೆಸಿರುವ ಪ್ರಯೋಗಗಳು ಮನುಷ್ಯನಿಗೂ ಹೊಂದುತ್ತವೆ. ಕಶೇರುಕ ಪ್ರಾಣಿವರ್ಗದಲ್ಲಿ ಘ್ರಾಣನರತಂತುಗಳು ಘ್ರಾಣಮುಕುಲವನ್ನು ಹೊಕ್ಕು ಅದರಲ್ಲಿ ಒಂದು ರೀತಿಯ ಬುಟ್ಟಿ ಹೆಣಿಗೆಯಂತೆ ಹೆಣೆದುಕೊಂಡಿರುವ ಗ್ಲೋಮರುಲೈ ಎಂಬ ಗೊಂಚಲುಗಳಲ್ಲಿ ಕೊನೆ ಮುಟ್ಟುತ್ತವೆ. ಮೊಲದಲ್ಲಿ ಪ್ರತಿ ಒಂದು ಗ್ಲೊಮರುಲಸ್ ಸುಮಾರು 26,000 ಘ್ರಾಣಗ್ರಾಹಿಗಳಿಂದ (ರಿಸೆಪ್ಟರ್ಸ್) ಘ್ರಾಣ ವಿದ್ಯುತ್ ಸ್ಪಂದನವನ್ನು ಪಡೆದು 24 ಮೈಟ್ರಲ್ ಜೀವಕೋಶಗಳ ಮತ್ತು 68 ಜೀವಕೋಶಗಳ ಕುಚ್ಚಿನ (ಟಫ್ಟ್ಸೆಲ್ಸ್) ಮೂಲಕ ಮುಂದಕ್ಕೆ ಸಾಗಿಸುತ್ತದೆ. ಎಡಬಲ ಒಂದೊಂದು ಕಡೆಯಲ್ಲೂ ಸುಮಾರು 60,000 ಮೈಟ್ರಲ್ ಜೀವಕೋಶಗಳಿರುತ್ತವೆಂದು ಅಂದಾಜು ಮಾಡಲಾಗಿದೆ. ಮೈಟ್ರಲ್ ಜೀವಕೋಶದ ಅಕ್ಷತಂತುಗಳು (ಆಕ್ಸೆಸ್ ಫೈಬರ್ಸ್) ಮಿದುಳಿನ ಬುಡದಲ್ಲಿರುವ ಘ್ರಾಣಕೇಂದ್ರವನ್ನು ಘ್ರಾಣಮಾರ್ಗದ ಮೂಲಕ ಸೇರುತ್ತವೆ. ವಾಸನೆಯನ್ನು ಪ್ರಚೋದಿಸಿದಾಗ ಮೂಲ ಘ್ರಾಣಮಾರ್ಗದ ಮೂಲಕ ಸೇರುತ್ತವೆ. ವಾಸನೆಯನ್ನು ಪ್ರಚೋದಿಸಿದಾಗ ಮೂಲ ಘ್ರಾಣನರ, ಘ್ರಾಣಮುಕುಲ, ಘ್ರಾಣಮಾರ್ಗ ಹಾಗೂ ಮಿದುಳಿನ ಪೈರಿಫಾರಮ್ ಹಾಲೆಗಳಲ್ಲಿ ವಿದ್ಯುತ್ ಚಟುವಟಿಕೆಯನ್ನು ಗುರುತಿಸಲು ಸಾಧ್ಯವಾಗಿದೆ. ಘ್ರಾಣಮುಕುಲವನ್ನೇ ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದರೆ ವಿವಿಧ ವಾಸನೆಗಳನ್ನು ಪತ್ತೆ ಮಾಡಲು ಅಸಾಧ್ಯ. ಘ್ರಾಣಕೇಂದ್ರದ ಕ್ರಿಯೆ ಹೀಗೆಯೇ ಉಂಟು ಎಂದು ಕರಾರುವಾಕ್ಕಾಗಿ ಹೇಳಲು ನಮಗೆ ವಿವರಗಳು ಇನ್ನೂ ತಿಳಿದಿಲ್ಲ.

ಒಂದು ಪದಾರ್ಥ ವಾಸನೆ ಬೀರಬೇಕಾದರೆ ಅದಕ್ಕೆ ಸ್ವಲ್ಪಮಟ್ಟಿಗಾದರೂ ಬಾಷ್ಪಗುಣ ಇರಬೇಕು. ಆದರಿಂದ ಅಣುಗಳು ಹೊರಬಿದ್ದು ವಾಯುಸುಳಿಗಳ ಮೂಲಕ ಮೂಗಿನ ಹೊಳ್ಳೆಗಳಿಗೆ ಪ್ರವೇಶಿಸಬೇಕು. ನೀರಿನಲ್ಲಿಯೂ ಜಿಡ್ಡಿನಲ್ಲಿಯೂ ಕರುಗುವ ವಸ್ತುಗಳಿಗೆ ಅಧಿಕ ವಾಸನೆ ಉಂಟು. ಆದರೆ ವಾಸನೆಯೇ ಇಲ್ಲದ ಇಂಥ ವಸ್ತುಗಳೂ ಇವೆ. ವಾಸನೆ ಬೀರುವ ಪದಾರ್ಥಗಳ ಭೌತ ಅಥವಾ ರಾಸಾಯನಿಕ ವೈಶಿಷ್ಟ್ಯಗಳೇನೆಂಬುಂದು ಇನ್ನೂ ತಿಳಿದಿಲ್ಲ. ರಾಸಾಯನಿಕ ಧಾತುಗಳಲ್ಲಿ ಕೇವಲ ಏಳು ವಸ್ತುಗಳಿಗೆ ಮಾತ್ರ ವಾಸನೆ ಉಂಟು. ಫೊರೀನ್, ಕ್ಲೋರೀನ್, ಬ್ರೋಮೀನ್, ಅಯೋಡೀನ್, ಓಜೋ಼ನ್ ರೂಪದಲ್ಲಿರುವ ಆಕ್ಸಿಜನ್, ರಂಜಕ ಹಾಗೂ ಆರ್ಸೆನಿಕ್, ವಾಸನೆ ಬೀರುವ ರಾಸಾಯನಿಕಗಳಲ್ಲಿ ಅನೇಕವು ಆಗಾರ್ಯ್ನಿಕ್ ಗುಂಪಿಗೆ ಸೇರಿದವು. ಬಹುಶಃ ರಾಸಾಯನಿಕ ವ್ಯವಸ್ಥೆ. ರೂಪ, ಅಣುಗಳು ಇತ್ಯಾದಿ ಅವುಗಳಿಂದ ಬರುವ ವಾಸನೆಗೆ ಕಾರಣವಾಗಿದೆ.
ಅತ್ಯಂತ ಅಲ್ಪಪ್ರಮಾಣದ ವಾಸನೆಯೂ ಘ್ರಾಣಕೇಂದ್ರವನ್ನು ಚೋದಿಸಬಲ್ಲದು. ರುಚಿಗಿಂತ ಘ್ರಾಣಸಕ್ತಿ 10,000 ಪಾಲಿನಷ್ಟು ಸೂಕ್ಷ್ಮ. ವಾತಾವರಣದ ಉಷ್ಣತೆಯೂ ಆವಿಯ ಸಾಂದ್ರತೆಯೂ ವಾಸನೆಯ ಗುಣಮಟ್ಟವನ್ನು ನೀರ್ಧರಿಸಬಲ್ಲವು. ಉದಾಹರಣೆಗೆ, ಸುಗಂಧದ್ರವ್ಯಗಳನ್ನು ತಯಾರಿಸುವಾಗ ಅವು ಸುಲಭವಾಗಿ ವಾಸನೆ ಬೀರಿ ಅಲ್ಪಕಾಲದಲ್ಲೇ ಅಳಿದು ಹೋಗಬೇಕೇ ಅಥವಾ ಸ್ವಲ್ಪ ಕಾಲ ಇದ್ದು ತರುವಾಯ ಇಲ್ಲದಂತಾಗಬೇಕೇ ಎಂಬುದನ್ನು ನಿರ್ಧರಿಸಿ ಸೂಕ್ತ ವಸ್ತುಗಳೊಂದಿಗೆ ಸುಗಂಧಗಳನ್ನು ಬೆರೆಸುತ್ತಾರೆ. ಆಲ್ಕೊಹಾಲ್ ಜೊತೆಗೆ ಬೆರೆಸಿದರೆ ಅದರ ಬಾಷ್ಪಶೀಲ ಗುಣದಿಂದಾಗಿ ವಾಸನೆ ಜಾಗ್ರತೆ ಮಾಯವಾಗುತ್ತದೆ. ನೀರಿನೊಂದಿಗೆ ಅತ್ಯಲ್ಪ ಪ್ರಮಾಣದಲ್ಲಿ ಇಂಡೋಲ್ ಸೇರಿಸಿ ದ್ರವ್ಯಗಳನ್ನು ಬೆರೆಸಿದರೆ ದೀರ್ಘಕಾಲ ವಾಸನೆ ಉಳಿಯಲು ಅವಕಾಶ ಉಂಟು (ಕ್ಲಿಂಗಿಂಗ್ ಓಡರ್).

ಯಾವುದಾದರೂ ರಾಸಾಯನಿಕ ಅಥವಾ ಕಂಪು ಬೀರುವ ಕಾರ್ಖಾನೆಗೆ ಭೇಟಿ ಕೊಟ್ಟರೆ ಮೊಟ್ಟ ಮೊದಲು ವಾಸನೆ ಬಂದು ನಮಗೆ ಅಪ್ಪಳಿಸಿ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಆದರೆ ಸ್ವಲ್ಪ ಕಾಲದ ಬಳಿಕ ಈ ವಾಸನೆಯ ಅನುಭವವೇ ಮಾಯವಾಗಿ ಹೋಗುವುದು. ನೀಲಗಿರಿ ತೈಲದ ವಾಸನೆ ಮೂಸಿ ತರುವಾಯ ಕರ್ಪುರವನ್ನು ಮೂಸಿದರೆ  ಇದರ ವಾಸನೆಯನ್ನು ಗುರುತಿಸುವುದು ಕಷ್ಟವಾದೀತು. ಸಾವಿರಾರು ರೀತಿಯ ವಾಸನೆಗಳಿವೆ. ಅವೆಲ್ಲವನ್ನೂ ವರ್ಗೀಕರಿಸುವುದು ಸಾಧ್ಯವಾಗಲಾರದಾದರೂ ಕೆಲವು ವಾಸನೆಗಳು ಮಾತ್ರ ಪ್ರಧಾನವಾಗಿರಬೇಕೆಂಬ ಅಂಶ ಮನನವಾಗಿದೆ. ವಾಸನೆಗಳ ವರ್ಗೀಕರಣ ವ್ಯಕ್ತಿಯ ಅನುಕೂಲತೆಗೆ ಸೇರಿದ್ದು. ಹೆನ್ನಿಂಗ್ ಎಂಬಾತ ಸುಮಾರು 400ಕ್ಕೂ ಅಧಿಕ ಸಂಖ್ಯೆಯ ವಾಸನೆಗಳ ವಿಚಾರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ಅಧ್ಯಯನ ಮಾಡಿದ್ದಾನೆ. ಆತ ವಾಸನೆಯನ್ನು ಆರು ಗುಂಪುಗಳಾಗಿ ವಿಂಗಡಿಸಿದ : ಹಣ್ಣು, ಹೂ, ಹೊಲಸು, ರಾಳ, ಸಂಬಾರ, ಸೀದ (ಸುಟ್ಟ) ಪದಾರ್ಥಗಳ ವಾಸನೆಗಳು. ಒಂದು ವಾಸನೆಗೂ ಮತ್ತೊಂದಕ್ಕೂ ಇರುವ ಮೂಲ ಸಂಬಂಧವನ್ನು ಚಿತ್ರ (2)ರಲ್ಲಿ ತೋರಿಸಿದೆ. 

ವಿದ್ಯುತ್ಶರೀರ ಕ್ರಿಯಾ (ಎಲೆಕ್ಟೋ ಫಿಸಿಯಾಲಾಜಿಕಲ್) ವಿಧಾನವನ್ನು ಬಳಸಿಕೊಂಡು ವಿವಿಧ ವಾಸನೆಗಳ ಗುಣವಿಶೇಷಗಳ ಜ್ಞಾನಚೋದನೆಯ ಅಧ್ಯಯನ ನಡೆದಿದೆ. ಎಲೆಕ್ಟ್ರೋಡುಗಳನ್ನು ಮುಕುಲಕ್ಕೆ ಚುಚ್ಚಿ ಘ್ರಾಣಮುಕುಲದ ವಿದ್ಯುತ್ ಚಟುವಟಿಕೆಗಳನ್ನು ಪರಿಶೀಲಿಸಬಹುದು. ಈ ಚಟುವಟಿಕೆ ಗಳು ಎರಡು ವಿಧ : ಒಂದು, ಅಲೆಯೋಪಾದಿಯಲ್ಲಿ ಮುಕುಲದ ಹೊರ ಭಾಗದಿಂದ ಬರುವ ಅನುಕ್ರಿಯೆ (ರೆಸ್ಪಾನ್ಸ್) ; ಎರಡು, ಮೈಟ್ರಲ್ ಜೀವಕೋಶಗಳನ್ನು ಚೋದಿಸಿದರೆ ಹೊರಬೀಳುವ ವಿದ್ಯುತ್ಪ್ರವಾಹ. ಮೊಲದ ಘ್ರಾಣ ಮುಕುಲದ ಮುಂಭಾಗ ಅಥವಾ ಬಾಯಿ ಕಡೆಗಿರುವ ಭಾಗ ನೀರಿನಲ್ಲಿ ಕರಗುವ ವಸ್ತುಗಳ ವಾಸನಾ ದ್ರವ್ಯಗಳಿಂದ ಹೆಚ್ಚು ಪ್ರಚೋದಿತ ವಾಗುತ್ತದೆ. ಇಷ್ಟೇ ಅಲ್ಲದೆ ಒಂದೇ ಒಂದು ಮೈಟ್ರಲ್ ಜೀವಕೋಶದ ಅಂಶವನ್ನು ಪ್ರಚೋದಿಸಲು ಸಾಧ್ಯವಾಗದಷ್ಟು ಸೂಕ್ಷ್ಮವಾದ ಎಲೆಕ್ಟ್ರೋಡನ್ನು ಉಪಯೋಗಿಸಿ ಪ್ರಚೋದಿಸಿದ ಸಂದರ್ಭಗಳಲ್ಲಿ ಬೇರೆಬೇರೆ ಮೈಟ್ರಲ್ ಜೀವಕೋಶಗಳು ವಿವಿಧ ವರ್ಗಕ್ಕೆ ಸೇರಿದ ರಾಸಾಯನಿಕಗಳಿಂದ ಪ್ರಚೋದಿತವಾಗುವುದು ಕಂಡುಬಂದಿತು.

ಇತ್ತೀಚಿನವರೆಗೂ ವಿವಿಧ ಪದಾರ್ಥಗಳ ರಾಸಾಯನಿಕ ಧಾತು ವೈವಿಧ್ಯವೇ ಅವುಗಳ ವಿವಿಧ ವಾಸನೆಗಳಿಗೆ ಕಾರಣವಿರಬೇಕೆಂದು ತಿಳಿಯಲಾಗಿತ್ತು. ಆದರೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಮೂರ್ ಎಂಬ ವಿಜ್ಞಾನಿ ಇದು ಬೇರೆ ಕಾರಣದಿಂದ ಎಂದು ತೋರಿಸಿದ್ದಾನೆ. ಪ್ರಧಾನ ವಾಸನೆಗಳು ಯಾವುದೆಂದು ಗೊತ್ತಾದರೆ ವಾಸನೆಯ ರಹಸ್ಯವನ್ನು ಭೇದಿಸಿದಂತೆ ಎಂದು ಆತನ ಅಭಿಪ್ರಾಯ. ಅಮೂರ್ ಸುಮಾರು 600 ಘ್ರಾಣಸಂಯುಕ್ತಗಳನ್ನು ಆಯ್ದು ಅವು ಬೀರುವ ವಾಸನೆಗಳಲ್ಲಿ ಯಾವ ನಿರ್ದಿಷ್ಟ ವಾಸನೆಗಳು ಅತ್ಯಧಿಕ ವಸ್ತುಗಳಲ್ಲಿ ಪುನರಾವರ್ತಿಸುವುದೆಂಬುದನ್ನು ಹುಡುಕಿ ನೋಡಿದ. ಏಳು ವಾಸನೆಗಳು ಪ್ರಧಾನ ಘ್ರಾಣಗಳೆಂಬುದು ಅವನ ತೀರ್ಮಾನ. ಅವು ಕರ್ಪುರ, ಕಸ್ತೂರಿ, ಹೂ, ಪೆಪ್ಪರ್ಮಿಂಟ್ ಅಥವಾ ಪುದಿನ ಸೊಪ್ಪು, ಕ್ಲೋರೋಫಾರಮ್, ಘಾಟಿನಿಂದ ಕೂಡಿದವು. ಕೊಳೆತವುಗಳ ಹೊಲಸು ನಾತ. ಈ ವಾಸನೆಗಳ ರಹಸ್ಯವೇನು? ಪ್ರಾಚೀನ ಗ್ರೀಸಿನ ಮಹಾದಾರ್ಶನಿಕರಲ್ಲಿ ಒಬ್ಬನಾದ ಉಕ್ರಿಷಿಯಸ್ ವಸ್ತುಗಳ ವಾಸನೆ ಅವುಗಳ ಅಣುಗಳ ಗಾತ್ರ ಮತ್ತು ಆಕಾರವನ್ನು ಅವಲಂಬಿಸಿದೆ ಎಂಬ ವಾದವನ್ನು ಸುಮಾರು 2000 ವರ್ಷಗಳ ಹಿಂದೆಯೇ ಮಂಡಿಸಿದ್ದ. ಕರ್ಪುರದ ವಾಸನೆಯನ್ನು ಹೋಲುವ ಸಂಯುಕ್ತಗಳನ್ನೆಲ್ಲ ವಿವಿಧ ಸೂಕ್ಷ್ಮದರ್ಶಕೀಯ ಪರೀಕ್ಷೆಗಳಿಗೆ ಒಳಪಡಿಸಿ ಪರಿಶೀಲಿಸಿದಾಗ ಅವುಗಳ ಗೋಳಾಕಾರದ ಅಣುಗಳಾಗಿದ್ದುವು. ಅವುಗಳ ಗಾತ್ರವೆಲ್ಲ ಹೆಚ್ಚು ಕಡಿಮೆ ಸಮನಾಗಿದ್ದವು. ಅವೆಲ್ಲ ಸುಮಾರಾಗಿ ಒಂದು ಸೆಂಟಿಮಿಟರಿನ ಕೋಟ್ಯಂಶದಷ್ಟು ವ್ಯಾಸದ ಗೋಲಿಗಳಾಗಿದ್ದುವು. ಕಸ್ತೂರಿವಾಸನೆ ಇರುವ ಸಂಯುಕ್ತಗಳ ಅಣುಗಳೆಲ್ಲ ಮೊಟ್ಟೆಯಾಕಾರದ ಅಣುಗಳಾಗಿ ಕಂಡುಬಂದಿದೆ. ಗುಲಾಬಿ, ಮಲ್ಲಿಗೆಯಂತಹ ಸುವಾಸನಾದ್ರವ್ಯ ಸಂಯುಕ್ತಗಳ ಅಣುಗಳ ಆಕಾರ ಬಾಲಕಟ್ಟಿರುವ ಗುಂಡು ಗಾಳೀಪಟವನ್ನು ಹೋಲುತ್ತದೆ. ಪುದಿನದ ವಾಸನೆ ಕೊಡುವ ಅಣುಗಳಿಗೆ ಬೆಣೆ ಆಕಾರ ಉಂಟು. ಕ್ಲೊರೋಫಾರಮ್ ವಾಸನೆ ಬೀರುವ ದ್ರವ್ಯಗಳ ಅಣುಗಳು ಗುಂಡು ಕಂಬಿ ಅಥವಾ ತಂತಿಯ ಆಕಾರವೆಂದು ತಿಳಿದಿದೆ. ನಮ್ಮ ಮೂಗು ಈ ಅಣುಗಳನ್ನು ಹೇಗೆ ಗುರುತಿಸುತ್ತದೆ? ಗುರುತು ಹಚ್ಚಲು ಗಾತ್ರ ಮತ್ತು ಆಕಾರ ಮುಖ್ಯ. ಮೂಗಿನ ಘ್ರಾಣ ಮುಕುಲದ ಮೈಮೇಲೆ ಲಕ್ಷಾಂತರ ಗುಳಿಗಳಿವೆ. ಇವುಗಳಲ್ಲಿ ಕೆಲವು ಅರ್ಧಗೋಳಾಕಾರ (ಬಾಣಲೆಯಂತೆ) ಇವೆ. ಇವುಗಳ ಅಗಲ ಒಂದು ಸೆಂಟಿಮೀಟರಿನ ಕೋಟ್ಯಂಶದಷ್ಟು. ಆಳ ಅದರರ್ಧ. ಈ ಪುಟಾಣಿ ಬಾಣಲೆಗಳಲ್ಲಿ ಅದೇ ಗಾತ್ರದ ಗೋಳಾಣು ಸರಿಯಾಗಿ ಕೂರಬಹುದು. ಆದರೆ ಗೋಳದ ಅರ್ಧಭಾಗ ಮೇಲಿರುತ್ತದೆ. ಹೀಗೆ ಅಣುಗೋಳದಲ್ಲಿ ಹೊಂದಿಕೊಂಡು ಕೂಡಿದ ಒಡನೆ ನಮಗೆ ಕರ್ಪುರಸದೃಶ ವಾಸನೆಯ ಅನುಭವವಾಗುತ್ತದೆ. ಘ್ರಾಣಮುಕುಲದಲ್ಲಿರುವ ಇತರ ಕೆಲವು ಗುಳಿಗಳು ಅಂಡಾಕಾರದ ತಟ್ಟೆಗಳಂತಿವೆ. ಇವುಗಳಲ್ಲಿ ಅದೇ ಗಾತ್ರದ ಮೊಟ್ಟೆಯಾಕಾರದ ಅಣುಗಳು ಸಲೀಸಾಗಿ ಅಳವಡುವುವು. ಕೂಡಲೇ ನಮಗೆ ಕಸ್ತೂರಿ ವಾಸನೆಯ ಅನುಭವವಾಗುತ್ತದೆ. ಮತ್ತೆ ಕೆಲವು ಗುಳಿಗಳಿಗೆ ಒಂದು ಗುಂಡು ತಟ್ಟೆ, ಆ ತಟ್ಟೆಗೆ ಒಂದು ಉದ್ದವಾದ ಆದರೆ ತಟ್ಟೆಗಿಂತ ಆಳವಾದ ಕಾಲುವೆ ಹಿಡಿ ಜೋಡಿಸಿರುವ ಆಕಾರ ಉಂಟು. ಇಂಥ ಗುಳಿಗಳು ಗಾಳಿಪಟ ಆಕಾರದ ಅಣುಗಳಿಗೆ ತಕ್ಕ ಆಸನಗಳು. ಅಣುಗಳು ಆಯಾ ಗುಳಿಗಳಲ್ಲಿ ಕುಳಿತ ಒಡನೆ ಕುಸುಮದ ಸುವಾಸನೆಯಿಂದ ನಮ್ಮ ಮನಸ್ಸು ತಣಿಯುತ್ತದೆ. ಇದೇ ರೀತಿ ಬೆಣೆಯ ಆಕಾರದ, ದೋಣಿಯ ಆಕಾರದ ಗುಳಿಗಳನ್ನು ಆಯಾ ಘನಾಕಾರದ ಅಣುಗಳು ತುಂಬಿದಾಗ ಪುದಿನ ಮತ್ತು ಕ್ಲೋರೋಫಾರಮ್ ವಾಸನೆಗಳನ್ನು ನಾವು ಗುರುತಿಸುತ್ತೇವೆ. ವಾಸನೆಯ ಜ್ಞಾನಪ್ರಚೋದನೆ ಆರಂಭವಾಗುವುದು ಮೂಗಿನ ಹೊಳ್ಳೆಯೊಳಗಿರುವ ಘ್ರಾಣಕ್ಷೇತ್ರದಲ್ಲಿ ಎಂದು ಮೊದಲು ಹೇಳಿದೆ. ವಿವಿಧ ವಾಸನೆಗಳ ಜ್ಞಾನದ ಅರಿವಾಗುವುದು ಘ್ರಾಣಮುಕುಲದಲ್ಲಿ ಎಂದು ಈಗ ಹೇಳಲಾಗಿದೆ. ಅಂದರೆ ಘ್ರಾಣಪ್ರಚೋದನೆ ಘ್ರಾಣಕ್ಷೇತ್ರದಲ್ಲೇ ಅಥವಾ ಘ್ರಾಣ ಮುಕುಲದಲ್ಲೇ ಎಂಬ ಗೊಂದಲ ಉಂಟಾಗಬಹುದು. ನಿಜಕ್ಕೂ ಹೇಳುವುದಾದರೆ ಈ ವಿಚಾರದಲ್ಲಿ ಇರುವ ಜ್ಞಾನ ಪರಿಪಕ್ವವಾಗಿಲ್ಲ. ಘ್ರಾಣಕ್ಷೇತ್ರದಲ್ಲಿ ವಾಸನೆಯ ಅರಿವು ಪ್ರಾರಂಭವಾಗುತ್ತದೆಂಬುದು ಮಾತ್ರ ಇತ್ಯರ್ಥವಾಗಿದೆ. ವಾಸನೆಗಳ ವೈವಿಧ್ಯದ (ಅಂದರೆ ಏಳು ವಾಸನೆಗಳಲ್ಲಿ ಯಾವುದು ಎಂದು ನಿರ್ಣಯಿಸುವ ಸಾಮಥರ್ಯ್) ಅರಿವನ್ನು ಉಂಟುಮಾಡುವ ಕ್ಷೇತ್ರ ಘ್ರಾಣಮುಕುಲವೆಂದು ಹೇಳಲಾಗಿದೆ. ಇದನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದರೆ ವಿವಿಧ ವಾಸನೆಗಳನ್ನು ಗುರುತಿಸುವುದು ಅಸಾಧ್ಯವೆಂದೂ ತಿಳಿದಿದೆ. ಈ ವಿವರಗಳನ್ನು ಅಂಗೀಕರಿಸುವ ಮುನ್ನ ಮತ್ತೊಂದು ಪ್ರಶ್ನೆ ಏಳುವುದು ಸಹಜ - ವಾಸನೆಯ ಅಣುಗಳು ಮೂಗಿನ ಹೊಳ್ಳೆಯೊಳಗಿನ ಘ್ರಾಣಕ್ಷೇತ್ರ ಸ್ಪರ್ಶವಾದೊಡನೆ ವಿದ್ಯುತ್ಪ್ರವಾಹವಾಗಿ ಮಾರ್ಪಟ್ಟು ಅದು ನರತಂತುಗಳ ಮೂಲಕ ಘ್ರಾಣಮುಕುಲಕ್ಕೆ ಹಾಯುತ್ತದೆ: ಈಗ ಘ್ರಾಣವೈವಿಧ್ಯದ ಅರಿವಾಗಲು ಈ ವಿದ್ಯುತ್ಪ್ರವಾಹವಾಗಿ ಮಾರ್ಪಟ್ಟು ಅದು ನರತಂತುಗಳ ಮೂಲಕ ಘ್ರಾಣಮುಕುಲಕ್ಕೆ ಹಾಯುತ್ತದೆ: ಈಗ ಘ್ರಾನವೈವಿಧ್ಯದ ಅರಿವಾಗಲು ಈ ವಿದ್ಯುತ್ಪ್ರವಾಹ ಪುನಃ ಅನುಕ್ರಮ ಆಕಾರ ಗಾತ್ರದ ಅಣುಗಳಾಗಿ ಘ್ರಾಣಮುಕುಲದಲ್ಲಿರುವ ಗುಳಿಗಳಲ್ಲಿ ಹೊಂದಿಕೊಳ್ಳಬೇಕೇ ಎಂಬುದು ತಿಳಿದಿಲ್ಲ.

ಘಾಟು ಹಗೂ ಕೊಳೆತು ಹೊಲಸು ಬೀರುವ ನಾತದ ಅನುಭವದ ಮೂಲ ಈ ರೀತಿಯದಲ್ಲ, ಇವೆರಡು ವಾಸನೆಗಳ ಅನುಭವಕ್ಕೆ ಅಣುಗಳ ಗಾತ್ರ, ಆಕಾರ ಕಾರಣವಲ್ಲ, ಬದಲು ಅವುಗಳ ವಿದ್ಯುತ್ ಸ್ಥಿತಿಗಳು. ಕೆಲವು ಅಣುಗಳು ತಮ್ಮ ಹೊರಹೊದಿಕೆಯ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ. ಅಂದರೆ ಅವು ಧನ ಹೊರಹೊದಿಕೆಯ ಎಲೆಕ್ಟ್ರಾನುಗಳನ್ನು ಕಳೆದುಕೊಂಡಿರುತ್ತವೆ. ಅಂದರೆ ಅವು ಧನ ವಿದ್ಯುತ್ತಿನ ಅಣುಗಳಾಗಿರುತ್ತವೆ. ಇಂಥ ಅಣುಗಳು ಗಾಳಿಯಲ್ಲಿ ಬೆರೆತಿದ್ದರೆ ಅವು ಘ್ರಾಣಮುಕುಲದಲ್ಲಿರುವ ಋಣವಿದ್ಯುತ್ ಪ್ರಾಂತಗಳ ಕಡೆ ಧಾವಿಸುತ್ತವೆ. ಹಾಗೆ ಮುಕುಲದ ಮೇಲೆ ಬಿದ್ದಾಗ ಘಾಟು ವಾಸನೆಯ - ಮೆಣಸು, ಸೀಗೆಪುಡಿ ಇತ್ಯಾದಿ ಗುಂಪಿಗೆ ಸೇರಿದ ವಸ್ತುಗಳ ವಾಸನೆ ಅರಿವು ಬರುತ್ತದೆ. ಈ ವಾಸನೆಗಳಿಗೆ ವಿದ್ಯುನ್ಮಿತ್ರ ಘ್ರಾಣಗಳೆಂದು ಹೆಸರು. ಇನ್ನು ಕೆಲವು ಅಣುಗಳ ಹೊರವಲಯಗಳಲ್ಲಿ ಸಮವಿದ್ಯುತ್ ಸ್ಥಿತಿಗೆ ಬೇಕಾದದ್ದಕ್ಕಿಂತ ಹೆಚ್ಚು ಎಲೆಕ್ಟ್ರಾನುಗಳಿರುತ್ತವೆ. ಈ ಅಣುಗಳನ್ನು ಮುಕುಲದಲ್ಲಿ ಅಲ್ಲಲ್ಲಿರುವ ಧನವಿದ್ಯುತ್ಪ್ರಾಂತಗಳು ತಮ್ಮ ಕಡೆಗೆ ಎಳೆದುಕೊಳ್ಳುತ್ತವೆ. ಇವೆರಡೂ ಸಂಧಿಸಿದಾಗ ಕೊಳೆತ ನಾತ ನಮ್ಮನ್ನು ಪೀಡಿಸುತ್ತದೆ. ಇಂಥ ವಾಸನೆಗಳಿಗೆ ಪರಮಾಣು ಬೀಜಮಿತ್ರ ಅಥವಾ ಬೀಜಮಿತ್ರ ಘ್ರಾಣಗಳೆಂದು ಹೆಸರು. ಏಕೆಂದರೆ ಬೀಜಗಳು ಧನ ವಿದ್ಯುದಾವೇಶಗಳು. ಕೆಲವು ಅಣುಗಳ ಆಕಾರ ತೊಡಕಾಗಿದ್ದು ಅವು ಒಂದು ಭಂಗಿಯಲ್ಲಿ ಬಾಣಲೆಯಲ್ಲಿ ಸುಸೂತ್ರವಾಗಿ ಕೂರಬಹುದು. ಇನ್ನೊಂದು ನಿಲುವಿನಲ್ಲಿ ಬೆಣೆಯಾಕಾರದ ಗುಳಿಯಲ್ಲಿ ಅವು ಹಿಡಿಸಬಹುದು. ಈ ಸಂದರ್ಭದಲ್ಲಿ ಕರ್ಪುರ ಹಾಗೂ ಪುದಿನಗಳ ಮಿಶ್ರವಾಸನೆಯ ಅನುಭವ ನಮಗಾಗುತ್ತದೆ. ಇದೇ ರೀತಿ ಇತರ ಮಿಶ್ರ ಘ್ರಾಣಗಳ ಪರಿಚಯವೂ ಆಗುವುದು. 

ಅಮೂರನ ಈ ವಾದಕ್ಕೆ ಅವನ ಸಹಸಂಶೋಧಕರಾದ ರೂಬಿನ್ ಮತ್ತು ಜಾನ್ಸ್ಟನ್ ಎಂಬುವವರು ಅತಿ ಸಮರ್ಪಕವಾದ ಪ್ರಾಯೋಗಿಕ ಸಮರ್ಥನೆಗಳನ್ನು ದೊರಕಿಸಿ ಕೊಟ್ಟಿದ್ದಾರೆ. ಅವು ಕೃತಕ ಸಂಶ್ಲೇಷಣೆಯಿಂದ ವಿವಿಧ ಆಕಾರಗಳ ಅಣುಗಳನ್ನು ತಯಾರಿಸಿ ಅವನ್ನು ಆವಿಯ ರೂಪದಲ್ಲಿ ಕೊಳವೆ ಕವಾಟಗಳ ಮೂಲಕ ಗೊತ್ತಾದ ಪ್ರಮಾಣದಲ್ಲಿ ವಾಯುವಿನೊಂದಿಗೆ ಬೆರೆಸಿ ಘ್ರಾಣ ಪ್ರವೀಣರ ಮೂಗುಗಳಿಗೆ ಬೀರಿದ್ದಾರೆ. ಇಂಥ ಉಪಕರಣಗಳಿಗೆ ಘ್ರಾಣಮಾಪಿಗಳೆಂದು ಹೆಸರು. ಘ್ರಾಣಮಾಪಿಗಳಿಂದ ಹೊರಬಿದ್ದ ವಿವಿಧ ವಾಸನೆಗಳನ್ನು ಘ್ರಾಣಪ್ರವೀಣರು ನಿರೀಕ್ಷೆಗೆ ಅನುಗುಣವಾಗಿಯೇ ಗುರುತಿಸಿದ್ದಾರೆ. ಉದಾಹರಣೆಗೆ ಕರ್ಪುರ, ಕಸ್ತೂರಿ, ಹೂ, ಪುದಿನಗಳ ವಾಸನೆಗಳನ್ನು ಸೂಸುವ ಅಣುಗಳನ್ನು ರಚಿಸಿ ತಕ್ಕ ಪ್ರಮಾಣದಲ್ಲಿ ಬೆರೆಸಿ ಅವರು ಗಂಧದೆಣ್ಣೆಯ ವಾಸನೆ ಬೀರುವ ದ್ರವ್ಯವನ್ನು ಯಶಸ್ವಿಯಾಗಿ ಸೃಷ್ಟಿಸಿದ್ದಾರೆ. ಈ ದ್ರವ್ಯದ ರಾಸಾಯನಿಕ ಸಂಯೋಜನೆಗೂ ಗಂಧದೆಣ್ಣೆಯ ಪರಮಾಣು ಸಂಯೋಜನೆಗೂ ಯಾವ ಸಂಬಂಧವೂ ಇಲ್ಲ. 

ವಾಸನೆಗಳ ಮಿಶ್ರಣ ಹಾಗೂ ಸ್ವಾದ (ಓಡರ್ ಬ್ಲೆಂಡಿಂಗ್ ಅಂಡ್ ಪ್ಲೇವರ್) : ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಕ್ರಮವಿದು. ವಾಸನೆಗಳ ಸಂಯೋಜನೆ ಹಾಗೂ ವಿವಿಧ ಮಿಶ್ರಣಗಳು ವ್ಯವಹಾರದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಏಕಕಾಲದಲ್ಲಿ ಎರಡು ರೀತಿಯ ವಾಸನೆಗಳನ್ನು ಮೂಸಿದರೆ ಅವುಗಳ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯ. ಇವೆರಡೂ ವಾಸನೆಗಳಲ್ಲಿರುವ ವ್ಯತ್ಯಾಸ ಕಡಿಮೆಯಾದಷ್ಟೂ ಅವುಗಳ ಸಂಯೋಜನ ಸಾಮಥರ್ಯ್ ಅಧಿಕಗೊಳ್ಳುತ್ತದೆ. ಹೀಗಿದ್ದರೂ ಒಬ್ಬ ಘ್ರಾಣಪ್ರವೀಣ ಎರಡು ಸಂಯೋಜಿತ ವಾಸನೆಗಳು ಯಾವುವೆಂಬುದನ್ನು ಸಾಮಾನ್ಯವಾಗಿ ಹೇಳಬಲ್ಲ. ಒಂದರ ವಾಸನೆ ಮತ್ತೊಂದಕ್ಕಿಂತ ಬಹುತೇಕ ಹೆಚ್ಚಿದ್ದರೆ ಇದು ಮತ್ತೊಂದರ ವಾಸನೆಗೆ ಅಡ್ಡಿಬರುತ್ತದೆ. ವಾಸನೆಯ ಅಳಿವಿಗೆ ರಾಸಾಯನಿಕ ತಟಸ್ಥೀಕರಣ (ನ್ಯೂಟ್ರಲೈಸೇಷನ್) ಅನೇಕ ವೇಳೆ ಮೂಲ ಆಧಾರ: ಮತ್ತು ರಾಸಾಯನಿಕಗಳಿಗೆ ಸಂಬಂಧವಿಲ್ಲದ ವಾಸನೆಗಳಲ್ಲಿ ಶರೀರವೈಜ್ಞಾನಿಕ (ಫಿಸಿಯಲಾಜಿಕಲ್) ಇಲ್ಲವೇ ಮನೋವೈಜ್ಞಾನಿಕ (ಸೈಕಲಾಜಿಕಲ್) ಪ್ರಚೋದನೆ ಆಧಾರ ಎಂಬುದು ಕೆಲವರ ಅಭಿಪ್ರಾಯ. ಆದರೆ ಸಾಮಾನ್ಯವಾಗಿ ಈ ಅಭಿಪ್ರಾಯಕ್ಕೆ ಮನ್ನಣೆ ದೊರೆತಿಲ್ಲ. ಸುಗಂಧ ಸಂಯೋಜನೆ ನಡೆಯುವುದು ಬಹುಮಟ್ಟಿಗೆ ಪ್ರವೀಣನ ಕುಶಲತೆಯಿಂದಲೇ ಹೊರತು ವೈಜ್ಞಾನಿಕ ಸೂತ್ರಗಳಿಂದಲ್ಲ. 

ಆಹಾರ ಪದಾರ್ಥಗಳಿಗೆ ಇರುವ ಸ್ವಾದವೈಶಿಷ್ಟ್ಯ ವಾಸನೆಯನ್ನೇ ಅವಲಂಬಿಸುತ್ತದೆ. ಇದು ಅನೇಕ ಅನುಭವಗಳು ಒಂದುಗೂಡಿ ವ್ಯಕ್ತಿಯ ಪ್ರಜ್ಞೆಗೆ ಬರುವಂಥದು. ನೀರುಳ್ಳಿ ಕರಿಯುವಾಗ ಅಥವಾ ಕಾಫಿಬೀಜ ಹುರಿಯುವಾಗ ಹೊರ ಬರುವ ಘಮಘಮಗಳಲ್ಲಿ ಘ್ರಾಣಪ್ರಜ್ಞೆಯೇ ಪ್ರಧಾನ. ಆಹಾರ ಕೈಗಾರಿಕೆಯಲ್ಲಿ ಸ್ವಾದ ಪಾತ್ರ ಬಹುಮುಖ್ಯ. ಈಚೀಚೆಗೆ ಸ್ವಾದಗಳಿಂದ ಗಿರಾಕಿಗಳನು ಆಕರ್ಷಿಸಲು ಪ್ರವೀಣರ ತಂಡವನ್ನೇ ನೇಮಿಸುವುದು ವಾಡಿಕೆಯಾಗಿದೆ. ಇಂಥ ತಂಡ ಆಹಾರಗಳ ಸ್ವಾದಗಳಲ್ಲಿ ಅತಿ ಸೂಕ್ಷ್ಮವ್ಯತ್ಯಾಸಗಳನ್ನು ಶೋಧಿಸಿ ಗ್ರಾಹಕರ ದೃಷ್ಟಿಯಿಂದ ಯಾವುದು ಮೇಲು ಯಾವುದು ಕೀಳು ಎಂಬ ನಿರ್ಣಯವನ್ನು ಕೊಡುವುದು. ಆದರೆ ಈ ತಂಡದವರು ಮುಖ್ಯವಾಗಿ ತಮಗಿರುವ ರುಚಿ ಮತ್ತು ಘ್ರಾಣಸಾಮಥರ್ಯ್ಗಳ ಆಧಾರಗಳಿಂದ ನಿರ್ಣಯಕ್ಕೆ ಬರುತ್ತಾರೆಯೇ ವಿನಾ ವೈಜ್ಞಾನಿಕ ನಿಯಮಗಳಿಂದಲ್ಲ.

ಘ್ರಾಣಸಾಮಥರ್ಯ್ ಮತ್ತು ವ್ಯಕ್ತಿವರ್ತನೆ : ವಾಸನೆ ಹಿಡಿದು ತನ್ನ ವರ್ತನೆ ರೂಪಿಸಿಕೊಳ್ಳುವುದನ್ನು ಕೆಳವರ್ಗಗಳ ಪ್ರಾಣಿಗಳಲ್ಲಿ ಕಾಣಬಹುದು. ಸ್ನೇಹಿತ ಅಥವಾ ಶತ್ರು ಎಂಬುದನ್ನು ಕೀಟಗಳು ತಮ್ಮ ಘ್ರಾಣಸಾಮಥರ್ಯ್ದಿಂದಲೇ, ತಿಳಿದುಕೊಳ್ಳುತ್ತವೆ. ಕೆಲವು ಜಾತಿಯ ಇರುವೆಗಳ ಗ್ರಾಹಕತಂತುಗಳನ್ನು ತೆಗೆದುಬಿಟ್ಟರೆ ಅವು ತಮ್ಮ ತಮ್ಮಲ್ಲೇ ಕಚ್ಚಾಡಿ ನಾಶಹೊಂದುವುದುಂಟು. ಜೇನ್ನೊಣಗಳು ತಮ್ಮ ಗೂಡಲ್ಲದೆ ಅನ್ಯ ಗೂಡಿನೊಳಗೆ ನುಗ್ಗಿದರೆ ಅವು ಪರಕೀಯ ಕೀಟಗಳೆಂದು ಆ ಗೂಡಿನ ಜೇನ್ನೊಣಗಳು ಘ್ರಾಣಸಾಮಥರ್ಯ್ದಿಂದಲೇ ನಿರ್ಧರಿಸಿ ಅವನ್ನು ಕೊಂದುಹಾಕುತ್ತವೆ. ಜೇನ್ನೊಣಗಳಿಗೆ ಗ್ರಾಹಕತಂತುಗಳ ಜೊತೆಗೆ ಹೊಟ್ಟೆಯ ತುದಿಯಲ್ಲಿ ಮತ್ತೊಂದು ಘ್ರಾಣಾಂಗವೂ ಉಂಟು. ಇವು ಅವುಗಳ ಆಹಾರಾನ್ವೇಷಣೆಯಲ್ಲಿ ಸಹಾಯಕವಾಗುತ್ತವೆ. 

ವಾಸನೆಗೂ ಲೈಂಗಿಕ ಆಕರ್ಷಣೆ ಮತ್ತು ನಡತೆಗೂ ನಿಕಟ ಸಂಬಂಧವಿದೆ. ಹೆಣ್ಣು ಗಂಡುಗಳ ಗ್ರಾಹಕ ತಂತುಗಳಲ್ಲಿರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಇಲ್ಲಿ ಗಮನಿಸ ಬಹುದು. ಕಾಡುಗಳಲ್ಲಿರುವ ಸಸ್ತನಿ ಪ್ರಾಣಿಗಳು ಇತರ ಪ್ರಾಣಿಗಳನ್ನು ಆಕರ್ಷಿಸಲು ತಮ್ಮ ಘ್ರಾಣಗ್ರಂಥಿಗಳನ್ನು ಉಪಯೋಗಿಸಿಕೊಳ್ಳುತ್ತವೆ. ಮೃಗಗಳ ಬೆದೆಗಾಲದ ಅರಿವು ಮೂಡುವುದು ವಾಸನೆಯಿಂದಲೇ. ಋತುಚಕ್ರದ ವಿವಿಧ ವೇಳೆಗಳಲ್ಲಿ ಹೆಣ್ಣಿನ ವಾಸನೆ ವ್ಯತ್ಯಾಸ ಆಯಾ ಕಾಲದ ಅಂತಸ್ಸ್ರಾವಗಳನ್ನು ಅವಲಂಬಿಸಿದೆ.

ರುಚಿ : ಬಾಯಿಯ ಒಳಗಿರುವ ರುಚಿಮೊಗ್ಗುಗಳು (ಟೇಸ್ಟ್ ಬಡ್ಸ್) ನಮಗೆ ರುಚಿಯ ಅರಿವನ್ನು ಉಂಟುಮಾಡುವ ಅಂಗಗಳು. ಇವು ಜೀವಕೋಶಗಳ ಗುಚ್ಛ. ಇವುಗಳ ಆಕಾರ ಬೋಗುಣಿಯಂತೆ. ಈ ಕೋಶಗಳು ನಾಲಗೆಯಲ್ಲಿ ಅಡಕವಾಗಿದ್ದು ರುಚಿರಂಧ್ರಗಳ ಮೂಲಕ ಬಾಯ ಒಳಕ್ಕೆ ತೆರೆಯುತ್ತವೆ. ಈ ಗುಚ್ಛದಲ್ಲಿರುವ ಜೀವಕೋಶಗಳು ಎರಡು ವಿಧ : ತಳಪಾಯದಲ್ಲಿರುವ ಆಸರೆಕೋಶಗಳು ಹಾಗೂ ರುಚಿಗ್ರಾಹಕ (ಗಸ್ಟೇಟರಿ) ಸೂಕ್ಷ್ಮತಂತು ಕೋಶಗಳು. ಇವುಗಳ ತುದಿಯಲ್ಲಿ ನವಿರಾದ ಕೂದಲಿನ ಎಳೆ ರುಚಿರಂಧ್ರದ ಹೊರಗೆ ಚಾಚಿರುತ್ತದೆ. ಮನುಷ್ಯನ ಮತ್ತು ಸಸ್ತನಿ ಪ್ರಾಣಿಗಳ ನಾಲಗೆಗಳಲ್ಲಿ ಫಂಗಿಫಾರಮ್, ಪೋಲಿಯೇಟ್ಮತ್ತು ಸರ್ಕಂವ್ಯಾಲೇಟ್ ಪ್ಯಾಪಿಲ್ಲೆ ಎಂಬ ಉಬ್ಬುಗಳ ಮೇಲೆ ಹಾಗೂ ಅವುಗಳ ಪಕ್ಕಗಳಲ್ಲಿ ರುಚಿಮೊಗ್ಗುಗಳು ಇವೆ. ಅಲ್ಲದೆ ನಾಲಗೆ ಗಂಟಲುಗಳ ಮೇಲ್ಮೈಯಲ್ಲೂ ಅಡಕವಾಗಿರಬಹುದು. ರುಚಿಮೊಗ್ಗುಗಳನ್ನು ಹೊಗುವ ಜ್ಞಾನವಾಹಿ ನರತಂತು ರುಚಿಮೊಗ್ಗುಗಳ ಕೋಶಗಳ ಸುತ್ತ ಹೆಣೆದುಕೊಂಡು ಆವರಿಸಿ ಒಂದಲ್ಲ ಒಂದು ರುಚಿಗ್ರಾಹಕ ಕೋಶದೊಡನೆ ಸಂಪರ್ಕಿಸಿರುತ್ತದೆ. ನಾಲಗೆಯ ನರವನ್ನು ತುಂಡುಮಾಡಿದರೆ ನರತಂತುಗಳೂ ರುಚಿಮೊಗ್ಗುಗಳೂ ಕ್ಷೀಣಿಸಿ ಹೋಗುತ್ತವೆ. ನರವನ್ನು ಪುನಃ ಸೂಕ್ತರೀತಿಯಲ್ಲಿ ಕೂಡಿಸಿದರೆ ಆ ಜಾಗದಲ್ಲೇ ಇರುವ ಮೇಲುಪೊರೆಯ ಕೋಶಗಳಿಂದ ರುಚಿಮೊಗ್ಗುಗಳು ಪುನಃ ರೂಪುಗೊಳ್ಳುತ್ತವೆ.

ಅಕಶೇರುಕಗಳಲ್ಲಿ, ಉದಾಹರಣೆಗೆ ಕೀಟಗಳಲ್ಲಿ, ಘ್ರಾಣ ಹಾಗೂ ರುಚಿಯ ಪುರ್ಣ ವಿಭೇದವಿರುವುದನ್ನು ಕಾಣಬಹುದು. ಜಠರಪದಿ, ಹುಳುಗಳು ಇತ್ಯಾದಿ ಪ್ರಾಣಿಗಳು ಕಹಿ ಬೆರೆತ ಆಹಾರವನ್ನು ತ್ಯಜಿಸುವುದನ್ನೂ ಸಿಹಿ ಬೆರೆತ ಆಹಾರವನ್ನು ಸೇವಿಸುವುದನ್ನೂ ಪ್ರಯೋಗಳಿಂದ ಇತ್ಯರ್ಥಮಾಡಿ ತೋರಿಸಬಹುದು. ಕೀಟಗಳಿಗೆ ಅವುಗಳ ಕಾಲಿನ ಸುತ್ತ ರೋಮ ಹಾಗೂ ಬಾಯಿ ಸುತ್ತ ರಾಸಾಯನಿಕ ಗ್ರಾಹಿಗಳು ಸಾಕಷ್ಟಿವೆ. ಇವುಗಳಿಂದ ಕೀಟಗಳಿಗೆ ಸ್ಪರ್ಶದ ಅರಿವಾಗುವುದೊಂದೇ ಅಲ್ಲದೆ ರುಚಿಗ್ರಹಣವೂ ಆಗುತ್ತದೆ. ರೋಮ ಒಂದಕ್ಕೆ ಸಕ್ಕರೆ ತೊಟ್ಟಿನ ಸ್ಪರ್ಶ ಮಾಡಿಸಿದರೆ ಅದರ ಹೀರುಕೊಳವೆ (ಪ್ರೋಬೋಸಿಸ್) ಮುಂದಕ್ಕೆ ಚಾಚಿ ಬರುತ್ತದೆ. ಈ ತೊಟ್ಟಿಗೆ ಉಪ್ಪು ಬೆರೆಸಿ ಸ್ಪರ್ಶ ಮಾಡಿಸಿದರೆ ಹೀರುಕೊಳವೆ ಅಷ್ಟಾಗಿ ಮುಂಚಾಚುವುದಿಲ್ಲ. ನೊಣಗಳ ತುಟಿರೋಮಗಳಲ್ಲಿ ಮೂರು ನರತಂತುಗಳಿವೆ. ಇವುಗಳಲ್ಲಿ ಎರಡು ರೋಮಗಳು ಮಾತ್ರ ತುದಿಯಲ್ಲಿರುವ ರಾಸಾಯನಿಕಗ್ರಾಹಿಗಳವರೆಗೆ ಮುಂದುವರಿಯುತ್ತವೆ. ಈ ತಂತುಗಳ ಪ್ರಚೋದನೆಯಿಂದ ಉಂಟಾದ ವಿದ್ಯುತ್ಸ್ಪಂದನವನ್ನು ನಿರೂಪಿಸಿ ಪರಿಶೀಲಿಸಲು ಸಾಧ್ಯ. ಈ ರಾಸಾಯನಿಕ ಗ್ರಾಹಗಳು ಹೀರುಕೊಳವೆಯಲ್ಲೂ ಗ್ರಾಹಕತಂತುವಿನಲ್ಲೂ ಕೆಲವು ವೇಳೆ ಇರಬಹುದಾದರೂ ಇವೆರಡು ಅಂಗಗಳು ಮಾತ್ರ ಮುಖ್ಯವಾಗಿ ಕೀಟದ ಘ್ರಾಣೇಂದ್ರಿಯಗಳು. 

ರುಚಿ ಒಂದರ ಅರಿವನ್ನು ಮಾತ್ರ ಉಂಟು ಮಾಡುವ ಏಕೈಕ ಜ್ಞಾನವಾಹಿ ನರತಂತು ಕಶೇರುಕ ಪ್ರಾಣಿವರ್ಗಗಳಲ್ಲಿ ಇಲ್ಲ. ಮೂರು ನರಗಳು ಬೇರೆ ಅರಿವಿನ ಜೊತೆಗೆ ರುಚಿಯ ಅರಿವನ್ನೂ ಉಂಟುಮಾಡುತ್ತವೆ. ಮಾನವನಲ್ಲಿ ನಾಲಗೆಯ ಮುಂದಿನ ಭಾಗದಲ್ಲಿ ಜಿಹ್ವಾನರದ ವ್ಯಾಪನೆ ಉಂಟು. ಹಿಂದಿರುವ  ಭಾಗಕ್ಕೆ ಗಂಟಲ ಕುಹರ ಜಿಹ್ವಾನರದ ವ್ಯಾಪನೆ ಇದೆ. ಗಂಟಲು, ಧ್ವನಿಪೆಟ್ಟಿಗೆ ಗಳಿಗೆ ವೇಗಸ್ ನರದ ಕೆಲವು ಶಾಖೆಗಳು ಹೋಗುತ್ತವೆ. ಸ್ಪರ್ಶ, ಉಷ್ಣತೆ ಹಾಗೂ ನೋವುಗಳ ಅರಿವನ್ನು ಉಂಟುಮಾಡುವ ಕ್ರಿಯೆಯಲ್ಲಿ ಜಿಹ್ವಾನರಗಳು ಭಾಗಿಗಳಾಗುವುವು. ನಾಲಗೆಯ ಮುಂಭಾಗದಲ್ಲಿ ಉಂಟಾಗುವ ರುಚಿಯ ಅರಿವನ್ನು ಸಾಗಿಸುವ ನರತಂತುಗಳು ಜಿಹ್ವಾನರದಿಂದ ಬೇರ್ಪಟ್ಟು ಬೇರೆ ಒಂದು ಸೂಕ್ಷ್ಮ ನರತಂತುವಾಗಿ ಕಾರ್ಡಟಿಂಪಾನಿ ಎಂಬ ಹೆಸರಿನಿಂದ ಕಿವಿತಮಟೆಯ ಮೂಲಕ ಹಾದು ಮಿದುಳುಬಳ್ಳಿಯನ್ನು ಸೇರುತ್ತದೆ. ಕಿವಿ ತಮಟೆಯ ಶಸ್ತ್ರಚಿಕಿತ್ಸೆ ನಡೆಸುವಾಗ ಈ ಕಾರ್ಡಟಿಂಪಾನಿ ನರತಂತುವಿಗೆ ಅಪಾಯವಾಗುತ್ತದೆ. ಅಥವಾ ಅದು ಕಿತ್ತು ಹೋಗುವುದೂ ಉಂಟು. ಈ ಸಂದರ್ಭಗಳಲ್ಲಿ ಯಾವ ಕಡೆ ನರತಂತು ಕಿತ್ತುಹೋಗಿದೆಯೋ ಅಥವಾ ಅಪಾಯ ಸಂಭವಿಸಿದೆಯೋ ಆ ಭಾಗದಲ್ಲಿ ರುಚಿಮೊಗ್ಗುಗಳು ಅದೃಶ್ಯವಾಗಿ ನಾಲಗೆಯ ಮುಂಭಾಗದ ಎಡ ಅಥವಾ ಬಲ ಪಾಶರ್ವ್ದಲ್ಲಿ ರುಚಿಯ ಅರಿವು ನಾಶವಾಗುತ್ತದೆ. ಬಾಯಿಯಿಂದ ಹೊರಡುವ ರುಚಿಯ ನರತಂತುಗಳನ್ನು ಒಳಗೊಂಡಿರುವ ಎಲ್ಲ ಜ್ಞಾನವಾಹೀ ನರಗಳೂ ಒಂದು ಗೂಡಿ ಟ್ರ್ಯಾಕ್ಟಸ್ ಸಾಲಿಟೇರಿಯಸ್ ಪಥದಲ್ಲಿ ಹಾಗೂ ಮಿದುಳಿನ ಮೆಡುಲ್ಲ ಅಬ್ಲಾಂಗೇಟಕ್ಕೆ ಸಂಬಂಧಪಟ್ಟ ನ್ಯೂಕ್ಲಿಯಸಿನಲ್ಲಿ ಹಾಯುತ್ತವೆ. ಇಲ್ಲಿರುವ ಹಾಗೂ ಮಿದುಳಿನ ಇತರ ಎಲ್ಲ ಹಂತಗಳಲ್ಲಿ ಕೂಡ ಇರುವ ರುಚಿನರತಂತುಗಳು ನಾಲಗೆಯ ಸ್ಪರ್ಶ, ಉಷ್ಣತೆಗಳ ಅರಿವನ್ನು ಉಂಟುಮಾಡುವ ನರತಂಡದೊಂದಿಗೇ ಅತಿ ನಿಕಟವಾಗಿ ಒಡಗೂಡಿರುವುದು ಕಾಣುತ್ತದೆ. ಮುಂದೆ ಮೆಡುಲ್ಲದಿಂದ ನರತಂತುಗಳು ಮೇಲೆೇರಿ ಇತರ ತಂತುಗಳೊಂದಿಗೆ ಸ್ವಲ್ಪಮಟ್ಟಿಗೆ ಬೆರೆತು ಶಿರಗುಳಿಯ (ಥಲೆಮಸ್) ಸಂವೇದನ ನ್ಯೂಕ್ಲಿಯಸ್ ಮಧ್ಯಭಾಗದಲ್ಲಿ ಅಡಕವಾಗಿರುವ ಸಣ್ಣಕೋಶಗಳ ಗುಚ್ಛ ಒಂದನ್ನು ಸೇರುತ್ತವೆ. ಇಲ್ಲಿಂದ ಮುಂದೆ ರುಚಿನರತಂತುಗಳು ನಿಮ್ಮಿದುಳ ತೊಗಟೆಯ (ಸೆರೆಬ್ರಲ್ ಕಾರ್ಟೆಕ್ಸ್) ಮುಂಭಾಗಕ್ಕೆ ನಾಲಗೆಯ ಸ್ಪರ್ಶ ಮತ್ತು ಉಷ್ಣತಾ ನರತಂತುಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿಯೇ ಬಾಯಿಯಿಂದ ಬರುವ ಜ್ಞಾನವಾಹಿಗಳನ್ನು ಅಂಗೀಕರಿಸುವ ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಬರುತ್ತವೆ. ರುಚಿಪ್ರಜ್ಞೆಗೆ ನಿಮ್ಮಿದುಳಿನ (ಸೆರೆಬ್ರಮ್) ಯಾವ ಒಂದು ಭಾಗವೂ ಸೀಮಿತವಾಗಿಲ್ಲ. ಆಮ್ಲಗಳನ್ನು ಬಿಟ್ಟು ಉಳಿದ ಪದಾರ್ಥಗಳ ರುಚಿಪ್ರಜ್ಞೆಗೂ ರಾಸಾಯನಿಕ ಧಾತುವೈವಿಧ್ಯಕ್ಕೂ ಒಂದು ಸರಳ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ಇನಾಗಾರ್ಯ್ನಿಕ್ ಲವಣಗಳ ರುಚಿಗುಣ ತೊಡಕು. ಸೋಡಿಯಮ್ ಕ್ಲೋರೈಡ್ ಅಥವಾ ಅಡುಗೆ ಉಪ್ಪಿನ ರುಚಿ ಉಪ್ಪುಪ್ಪು. ಸಿಹಿ ಕಹಿ ರುಚಿಗಳು ಬೇರೆ ಬೇರೆ ರಾಸಾಯನಿಕ ವರ್ಗಗಳಿಗೆ ಸೇರಿದ ಪದಾರ್ಥಗಳಲ್ಲಿ ಕಂಡುಬರುತ್ತವೆ.

ನಾಲಗೆಯ ಪುರ್ಣಕ್ಷೇತ್ರದಲ್ಲಿ ರುಚಿಪ್ರಜ್ಞೆ ಇರುವುದಿಲ್ಲ. ಇದರ ಮಧ್ಯಕ್ಷೇತ್ರ ರುಚಿರಹಿತ. ನಾಲಗೆಯ ಅಂಚಿನಲ್ಲಿ ಉಪ್ಪು, ನಾಲಗೆಯ ತುದಿಯಲ್ಲಿ ಸಿಹಿ, ನಾಲಗೆಯ ಇಬ್ಬದಿಗಳಲ್ಲಿ ಹುಳಿ ಮತ್ತು ನಾಲಗೆಯ ಹಿಂಭಾಗದಲ್ಲಿ ಕಹಿ ಅರಿವಾಗುತ್ತವೆ. ಮೂಲತಃ ನಾಲ್ಕು ಅಂದರೆ ಉಪ್ಪು, ಹುಳಿ, ಸಿಹಿ ಮತ್ತು ಕಹಿಗಳನ್ನು ಗುರುತಿಸುವ ರುಚಿಗ್ರಾಹಿಗಳು ಮಾತ್ರ ಇವೆ ಎಂದು ನಂಬಲಾಗಿತ್ತು. ಪ್ರಾಣಿಗಳ ನಾಲಗೆಯ ವಿವಿಧ ಭಾಗಗಳನ್ನು ವಿದ್ಯುತ್ಕ್ರಿಯಾ ಪ್ರಚೋದನೆಗೆ ಒಳಪಡಿಸಿ ಹೊರಬಿದ್ದ ಚಿತ್ರಗಳ ಅಧ್ಯಯನದಿಂದ ಈ ನಂಬಿಕೆ ಆಧಾರರಹಿತವಾದದ್ದೆಂದೂ ರುಚಿವೈವಿಧ್ಯ ಪ್ರಾಣಿಗಳಲ್ಲಂತೂ ಇಷ್ಟು ಸರಳವಲ್ಲವೆಂದೂ ತಿಳಿದಿದೆ. ನಾಲಗೆಯ ಒಂದೇ ನರತಂತುವಿನಲ್ಲಿ ವಿವಿಧ ರುಚಿ ಪ್ರಚೋದನೆ ಸಾಧ್ಯ. ಮೂಲರುಚಿಯೊಂದೇ ಅಲ್ಲದೆ ಇತರ ಮಿಶ್ರ ರುಚಿ ಪ್ರಚೋದನೆ ಅಂದರೆ ಆಮ್ಲ+ಕ್ಷಾರ ಅಥವಾ ಆಮ್ಲ+ಕ್ಷಾರ+ಸಿಹಿ ರುಚಿಗಳು ಒಂದೇ ನರತಂತುವಿನ ಪ್ರತಿಕ್ರಿಯೆಯಾಗಿರಬಲ್ಲವು. ರುಚಿ ಮೊಗ್ಗುಗಳು ಒಂದೇ ರುಚಿಯಲ್ಲದೆ ಬೇರೆ ಬೇರೆ ರುಚಿಯ ಅನುಭವವನ್ನು ವ್ಯಕ್ತಿಗೆ ಮೂಡಿಸಬಲ್ಲವು ಎಂದು ತೋರುತ್ತದೆ. ಕೆಲವು ಜಾತಿಯ ಪ್ರಾಣಿಗಳಲ್ಲಿ ನೀರು ಕೂಡ ಕೆಲವು ರುಚಿಗ್ರಾಹಿಗಳನ್ನು ಪ್ರವಚೋದಿಸಬಲ್ಲುದು. ಅಂತೆಯೇ ಉಪ್ಪು ಈ ಪ್ರಚೋದನೆಗೆ ಅಡ್ಡಿ ತರಬಹುದು. ರುಚಿ ಇಂಥದ್ದೇ ಎಂಬ ಅನುಭವ ಮಿದುಳು ಈ ಪ್ರಚೋದನೆಗಳನ್ನು ಯಾವ ರೀತಿ ಅಳವಡಿಸಿಕೊಳ್ಳುತ್ತದೆ, ಯಾವ ರೀತಿ ರುಚಿವಾಹಿನಿಯನ್ನು ನರತಂತುಗಳ ಮೂಲಕ ಅಂಗೀಕರಿಸುತ್ತದೆ ಎಂಬುದನ್ನು ಅವಲಂಬಿಸಿದೆ. 

ಹುಳಿ : ಆಮ್ಲಗಳಲ್ಲಿರುವ ಹೈಡ್ರೊಜನ್ನಿನ ಅಯಾನುಗಳು ಹುಳಿ ರುಚಿಯ ಪ್ರಜ್ಞೆಗೆ ಕಾರಣ. ಈ ಅಯಾನುಗಳ ಸಾಂದ್ರತೆ ಪದಾರ್ಥದಲ್ಲಿ ಹೆಚ್ಚಿದಷ್ಟೂ ಹುಳಿ ಹೆಚ್ಚುತ್ತದೆ. ಆದರೆ ಹುಳಿ ರುಚಿಗೆ ಇದೊಂದೇ ಕಾರಣವಲ್ಲ. ಸಾರರಿಕ್ತ ಆಗಾರ್ಯ್ನಿಕ್ ಆಮ್ಲಗಳು. ಉದಾಹರಣೆಗೆ ಅಸಿಟಿಕ್ ಆಮ್ಲ, ಹೈಡ್ರೊಜನ್ ಅಯಾನುಗಳ ಸಾಂದ್ರತೆಗೆ ತಕ್ಕಂತೆ ಹುಳಿ ಹುಟ್ಟಿಸುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ತೋರುತ್ತದೆ. ಬಹೂಶಃ ಅಧಿಕವಾದ ಅದರ ಛೇದಕಸಾಮಥರ್ಯ್ದಿಂದ ಇದು ಸಾಧ್ಯವಾಗಿದೆ. 

ಉಪ್ಪು : ಉಪ್ಪಿನ ಪ್ರಜ್ಞೆ ಮೂಡುವುದು ನೀರಲ್ಲಿ ಕರಗುವ ಲವಣಗಳಿಂದ. ಅನೇಕ ರಾಸಾಯನಿಕ ಲವಣಗಳು ವಿವಿಧ ರುಚಿಗಳ ಅನುಭವ ಕೊಡುತ್ತವೆ. ಕಹಿ ಲವಣಗಳು, ಹುಳಿ ಲವಣಗಳು ಇತ್ಯಾದಿ ಉದಾಹರಣೆಗಳು. ಕಡಿಮೆ ಅಣುತೂಕವಿರುವ ಲವಣಗಳಲ್ಲಿ ಉಪ್ಪು ರುಚಿ ಪ್ರಧಾನ. ಆದರೆ ಬರಿಲಿಯಮ್ ಲವಣಗಳು ಸಿಹಿ. ಹೆಚ್ಚು ಅಣುತೂಕವಿರುವ ಲವಣಗಳಲ್ಲಿ ಕಹಿ ಪ್ರಧಾನ. ಪಾದರಸದ ಲವಣಗಳಂತೆ ಬಹುತೂಕವುಳ್ಳ ಲವಣಗಳು ಒಂದು ರೀತಿಯ ಲೋಹಪ್ರಧಾನ ರುಚಿಯನ್ನು ಪ್ರಚೋದಿಸುತ್ತವೆ. ಸೀಸ ಲವಣಗಳು ಸಿಹಿರುಚಿಕೊಡುತ್ತವೆ. ಧನವಿದ್ಯುತ್ ಕಣ ಹಾಗೂ ಋಣ ವಿದ್ಯುತ್ ಕಣಗಳೆರಡೂ ರುಚಿಯ ಗುಣಮಟ್ಟವನ್ನು ನಿರ್ಧರಿಸುವುದೊಂದೇ ಅಲ್ಲದೆ ಅದರ ಪ್ರಚೋದನೆಯ ಯಶಸ್ಸಿಗೂ ಕಾರಣ. ಮನುಷ್ಯರಲ್ಲಿ ಅಮೋನಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಸೋಡಿಯಮ್, ಲಿಥಿಯಮ್ ಮತ್ತು ಮೆಗ್ನೀಷಿಯಮ್ ಲವಣಗಳು ಅನುಕ್ರಮವಾಗಿ ಅಂತಕ್ಷಾರದಿಂದ ಅತ್ಯಲ್ಪ ಕ್ಷಾರರುಚಿ ಪ್ರಚೋದಕಗಳು.

ಸಿಹಿ : ಸೀಸ ಮತ್ತು ಬರಿಲಿಯಮ್ ಸೇರಿದ ಕೆಲವು ಇನಾಗಾರ್ಯ್ನಿಕ್ ಲವಣಗಳನ್ನು ಬಿಟ್ಟು ಉಳಿದೆಲ್ಲ ವಸ್ತುಗಳು ಸಿಹಿ ರುಚಿ ಇರುವುದು ಆಗಾರ್ಯ್ನಿಕ್ ಸಂಯುಕ್ತವಸ್ತುಗಳಿಗೆ ಎಂದು ಕಂಡುಬರುತ್ತದೆ. ಉದಾಹರಣೆಗೆ ಆಲ್ಕೊಹಾಲುಗಳು ಮತ್ತು ಗ್ಲೈಕಾಲುಗಳು, ಸಕ್ಕರೆ. ರಾಸಾಯನಿಕ ಧಾತುವೈವಿಧ್ಯಕ್ಕೂ ಸಿಹಿ ರುಚಿಗೂ ಇರುವ ಜಟಿಲ ಸಂಬಂಧ ಸಂಪುರ್ಣ ಅರ್ಥವಾಗಿಲ್ಲ. ಕೃತಕವಾಗಿ ತಯಾರಿಸಿದ ಸಾಕರಿನ್ ಡಲ್ಸಿನುಗಳೂ ಸಿಹಿರುಚಿ ಕೊಡುತ್ತವೆ ಎಂಬುದು ತಿಳಿದಿರುವ ವಿಷಯ. ಇವುಗಳ ಸಾರವನ್ನು ನೀರು ಬೆರೆಸಿ 700 ಪಟ್ಟು ಕಡಿಮೆ ಮಾಡಿದರೂ ಇವು ಸಿಹಿ ಅನುಭವವನ್ನು ಪ್ರಚೋದಿಸಬಲ್ಲವು. ಇಷ್ಟೇ ಅಲ್ಲದೆ ರುಚಿ ಅಣುವಿನ ಆವರಣದಲ್ಲಿ ಯಾವ ರೀತಿ ಯಾವ ಕಡೆ ಅಣುವಿನ ಪರಮಾಣುಗಳು ವ್ಯವಸ್ಥಿತವಾಗಿವೆ ಎಂಬುದು ಬಹುಮುಖ್ಯ. ಸಿಹಿ ಅಣುವಿನ ಪರಮಾಣು ವ್ಯವಸ್ಥೆಯಲ್ಲಿ ಅತ್ಯಲ್ಪ ಬದಲಾವಣೆಯಾದರೂ ಆ ವಸ್ತು ರುಚಿರಹಿತ ಅಥವಾ ಕಹಿಯಾಗುತ್ತದೆ. ಚಿತ್ರ (5)ರಲ್ಲಿ ಕೊಟ್ಟಿರುವ ಅಣುರೂಪಗಳನ್ನು ಗಮನಿಸಬಹುದು.

ಕಹಿ : ಇದು ಕೂಡ ಸಿಹಿಯಂತೆ ಅನೇಕ ರಾಸಾಯನಿಕಗಳಿಂದ ಪ್ರಚೋದಿತವಾಗುತ್ತದೆ. ಕಹಿಯೊಂದಿಗೆ ಸಿಹಿ ಮತ್ತಿತರ ರುಚಿಗಳ ಅನುಭವವೂ ಸೇರಿರುವುದು. ಇನಾಗಾರ್ಯ್ನಿಕ್ ಲವಣಗಳ ಅಣುಭಾರ ಹೆಚ್ಚಿದಂತೆ ಅಥವಾ ಆಗಾರ್ಯ್ನಿಕ್ ಅಣುಗಳ ಇಂಗಾಲ ಸರಪಳಿ ಹೆಚ್ಚಿದಂತೆ ಕಹಿಗುಣವೂ ವೃದ್ಧಿಯಾಗುತ್ತದೆ. ಕಹಿಗುಂಪಿಗೆ ಸೇರಿದ ಆಲ್ಕಲಾಯಿಡುಗಳು ಉದಾಹರಣೆಗೆ ಕ್ವಿನೈನ್, ಕ್ಯಾಫೀನ್, ಸ್ಟ್ರಿಕ್ನಿನ್ ಇತ್ಯಾದಿ - ಅತಿ ಕಹಿವಸ್ತುಗಳು : ಹಾಗೂ ಇವು ಅತಿ ಅಲ್ಪಪ್ರಮಾಣದಲ್ಲೇ ಪಾಷಾಣವಾಗಿ ಪರಿಣಮಿಸುತ್ತವೆ. ಕೆಲವರಿಗೆ ಕಹಿ ರುಚಿ ತಿಳಿಯುವುದಿಲ್ಲ. ಇವರು ರುಚಿ ಅಂಧರು. ಈ ಗುಣ ಮೆಂಡಲ್ ತತ್ವವನ್ನು ಅನುಸರಿಸಿ ಅಪ್ರಭಾವಶೀಲ ಜೀನುಗಳೊಂದಿಗೆ (ರಿಸೆಸ್ಸಿವ್ ಜೀನ್ಸ್) ಶಿಶುವಿಗೆ ಹಾಯುತ್ತದೆ. ಈ ವ್ಯಕ್ತಿಗಳಿಗೆ ಫೀನೈಲ್ ಥಯೋ ಕಾರ್ಬಮೈಡಿನ (ಪಿ.ಟಿ.ಸಿ) ಮತ್ತು ಇದರಂತೆ ಇರುವ ಮತ್ಯಾವುದೇ ರಾಸಾಯನಿಕ ವಸ್ತುಗಳ ರುಚಿ ಹತ್ತುವುದಿಲ್ಲ. ಕಾಕೇಷಿಯನ್ ಬುಡಕಟ್ಟಿಗೆ ಸೇರಿದ ಮೂರನೆಯ ಒಂದು ಭಾಗ ವ್ಯಕ್ತಿಗಳಿಗೆ ಈ ಗುಣ ಉಂಟು, ಉಳಿದ ಜನಾಂಗಗಳಲ್ಲಿ ಇದರ ಪ್ರಮಾಣ ವ್ಯತ್ಯಾಸವಾಗುತ್ತದೆ. ಪಿ.ಟಿ.ಸಿ. ರುಚಿ ಅಂಧತ್ವ ಮನುಷ್ಯ ಹಾಗೂ ಅವನ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಕಂಡುಬರುವ ವೈಶಿಷ್ಟ್ಯ. ಇದಕ್ಕೆ ಸಂಬಂಧಪಟ್ಟ ಜೀನಿನ ವಿಕಸನ ಬಹಳ ತಡವಾಗಿ ಹೊರಬಿದ್ದಿರಬೇಕು. ಆದರೆ ರುಚಿ ಅಂಧತೆಗೆ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ. ರುಚಿ ಬದಲಾವಣೆ ಕೆಲವು ಸಂದರ್ಭಗಳಲ್ಲಿ ಕಾಣಬಹುದು. ಅತಿ ಬಿಸಿಯಾದ ಅಥವಾ ಅತಿ ಬಿಸಿಯಾದ ಅಥವಾ ಅತಿ ಶೀತಾವಸ್ಥೆಯ ಪದಾರ್ಥ ಬಾಯಿಗೆ ಬಿದ್ದರೆ ತಾತ್ಕಾಲಿಕ ರುಚಿ ಅಂಧತ್ವವಾಗುವುದು ಎಲ್ಲರ ಅನುಭವ. ದೇಹದ ಉಷ್ಣತಾಮಟ್ಟ ಅಥವಾ ಅದಕ್ಕಿಂತ  ಸ್ವಲ್ಪ ಕಡಿಮೆ ಉಷ್ಣತೆಗಳಲ್ಲಿ ರುಚಿಯ ಅನುಭವ ಉತ್ಕೃಷ್ಟ. ಉಷ್ಣತೆ ಅಧಿಕಗೊಂಡರೆ ಸಿಹಿಯ ಗುಣಗ್ರಹಣವೂ ಉತ್ತಮಗೊಳ್ಳುತ್ತದೆ. ಆದರೆ ಉಪ್ಪು ಮತ್ತು ಕ್ವಿನೈನುಗಳ ರುಚಿ ಕಡಿಮೆಯಾಗುತ್ತದೆ. ಆಮ್ಲಗಳ ರುಚಿ ಬದಲಾವಣೆ ಅಷ್ಟಿಲ್ಲ. ರುಚಿಗುಣಗ್ರಹಣವನ್ನು ಒಂದು ನಿರ್ದಿಷ್ಟ ರಾಸಾಯನಿಕ ಕ್ರಿಯೆ ಎಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಸಾಧ್ಯವಾಗುತ್ತಿದ್ದರೆ ಎಲ್ಲ ರುಚಿಗಳ ಗ್ರಹಣವೂ ಉಷ್ಣತೆ ಅಧಿಕಗೊಂಡಂತೆಲ್ಲ ಉತ್ತಮಗೊಳ್ಳಬೇಕಿತ್ತು. ಬಾಯಿಯಲ್ಲಿಯೇ ಸ್ವಲ್ಪಕಾಲ ಒಂದು ದ್ರವವನ್ನು ಇಟ್ಟುಕೊಂಡಿದ್ದರೆ ಅದರ ರುಚಿ ಆಂಶಿಕವಾಗಿ ಅಥವಾ ಸಂಪುರ್ಣವಾಗಿ ಮರೆಯಾಗಬಹುದು. ಇನ್ನು ಕೆಲವು ವೇಳೆ ಒಂದು ಆಮ್ಲದಿಂದ ಈ ರೀತಿ ರುಚಿ ವ್ಯತ್ಯಾಸವಾದರೆ ಎಲ್ಲ ಆಮ್ಲಗಳಿಗೂ ಅದೇ ರೀತಿ ವ್ಯತ್ಯಾಸ ಕಾಣಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಪರಸ್ಪರ ರುಚಿ ಗುಣ ವ್ಯತ್ಯಾಸಗಳಿಂದ ಒಂದು ಮತ್ತೊಂದರ ರುಚಿ ಕೊಡಬಹುದು. ಸಾರರಿಕ್ತ ಆಮ್ಲದ ರುಚಿಗ್ರಹಣದ ತರುವಾಯ ಸಾಂದ್ರೀಕರಿಸಿದ ನೀರು ಸಿಹಿರುಚಿ ಕೊಡಬಹುದು. ಒಂದರ ರುಚಿಯನ್ನು ಇತರ ವಸ್ತುಗಳ ಮಿಶ್ರಣದಿಂದ ಕಾಣದಂತೆ ಮಾಡುವುದು ಎಲ್ಲರಿಗೂ ತಿಳಿದಿದೆ. ಉದಾಹರಣೆಗೆ ಹುಳಿಯನ್ನು ಬೆಲ್ಲ ಸಕ್ಕರೆ ಬೆರೆಸಿ ಮುಚ್ಚುವುದು. ರುಚಿ ಬದಲಾವಣೆಯನ್ನು ನಾಲಗೆ ಗ್ರಹಿಸಲು ಸಾರ ಕಡೇಪಕ್ಷ 20% ರಷ್ಟು ಹೆಚ್ಚಬೇಕು ಹಾಗೂ ಸಾರ 100ಕ್ಕೆ 100ರಷ್ಟು ಹೆಚ್ಚಿದಾಗಲೂ ವ್ಯತ್ಯಾಸ ಕಂಡುಬರುವ ಸಂದರ್ಭಗಳೂ ಉಂಟು. 

ಜೀವಿಗಳು ತಮಗೆ ಬೇಕಾದ ಆಹಾರ ಆರಿಸಿಕೊಳ್ಳುವುದೂ ಬೇಡದ್ದನ್ನು ಬಿಡುವುದೂ ಒಂದು ನಿಯಮಕ್ಕೆ ಒಳಪಟ್ಟಿದೆ ಎಂದರೆ ತಪ್ಪಿಲ್ಲ. ಜನಿಸಿದ ಶಿಶು ಮೊಲೆ ಚೀಪುವುದು ಒಂದು ನಿರಿಚ್ಛಾ ಪ್ರತಿಕ್ರಿಯೆ. ಇದನ್ನು ರುಚಿ ಬದಲಾವಣೆಯಿಂದ ಮಾರ್ಪಡಿಸಬಹುದು, ಚೀಪುವುದನ್ನು ಸಿಹಿ ಪದಾರ್ಥಗಳು ಹೆಚ್ಚಿಸುತ್ತವೆ. ಕಹಿ, ಉಪ್ಪು ಹಾಗೂ ಹುಳಿ ಪದಾರ್ಥಗಳಾದರೋ ಚೀಪುವುದನ್ನೇ ನಿಲ್ಲಿಸುತ್ತವೆ. ರುಚಿಯೇ ನಮ್ಮ ಮನಸ್ಸಿಗೆ ಹಿತವಾದ ಆಹಾರ ಎಂದು ಪ್ರಚೋದಿಸಿ ಅದನ್ನು ಸ್ವೀಕರಿಸುವಂತೆ ಪ್ರೇರೇಪಿಸುವುದು. ಮಕ್ಕಳಲ್ಲಿ ಹಾಗೂ ಇತರ ಕೆಳವರ್ಗದ ಜೀವಿಗಳಲ್ಲಿ ಆಹಾರದ ಸ್ವೀಕಾರ ಇಲ್ಲವೇ ತಿರಸ್ಕಾರ ಆಗುವುದು ಈ ರುಚಿವಿಶೇಷದಿಂದಲೇ. ಕೀಟಗಳಲ್ಲಿ ರುಚಿಗೆ ಪ್ರತಿಕ್ರಿಯೆ ಅವುಗಳ ಹೀರುಕೊಳವೆ ಉದ್ದಕ್ಕೆ ಚಾಚಿಕೊಳ್ಳುವುದು ಅಥವಾ ಮುದುಡಿಕೊಳ್ಳುವುದರಿಂದ ತಿಳಿಯಬಹುದು. ಸಿಹಿಯನ್ನು ಬಾಯಿಗಾಗಲೀ ಕಾಲಿಗಾಗಲೀ ಸೋಕಿಸಿದರೆ ಹೀರುಕೊಳವೆ ಮುಂದಕ್ಕೆ ಚಾಚಿರುತ್ತದೆ. ನೊಣವನ್ನು ಹೊಟ್ಟೆಗಿಲ್ಲದಂತೆ ಹಸಿವೆ ಹುಟ್ಟಿಸಿ ಅತಿ ಕಡಿಮೆ ಸಾರವಿರುವ ದ್ರವವನ್ನು ಸೋಕಸಿದರೂ ಹೀರುಕೊಳವೆ ಚಾಚುವಂತೆ ಮಾಡಬಹುದು. ಅದೇ ನೊಣಕ್ಕೆ ಹೊಟ್ಟೆ ತುಂಬಿದ ವೇಳೆಯಲ್ಲಿ ಇದೇ ದ್ರವವನ್ನು ಸೋಕಿಸಿದರೆ ಯಾವ ಪ್ರತಿಕ್ರಿಯೆಯನ್ನೂ ತೋರಿಸುವುದಿಲ್ಲ. ಆದ್ದರಿಂದಲೇ ಹೀರುಕೊಳವೆಯ ಚಾಚುವಿಕೆಯನ್ನು ಕೀಟಗಳಲ್ಲಿ ರುಚಿಸೂಚಿ ಎಂದು ಪರಿಗಣಿಸಲಾಗಿದೆ.

ಕೆಳದರ್ಜೆಯ ಸಸ್ತನಿಗಳಲ್ಲಿ, ಉದಾಹರಣೆಗೆ ಇಲಿಗಳಲ್ಲಿ, ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ತಮ್ಮ ದೇಹಕ್ಕೆ ಬೇಕಾದ ಸತ್ತ್ವಾಂಶಗಳುಳ್ಳ ಆಹಾರವನ್ನೇ ಚುನಾಯಿಸಿಕೊಳ್ಳುವ ಆಶ್ಚರ್ಯಕರ ಧೋರಣೆ ಇರುವುದು ಕಂಡುಬರುತ್ತದೆ. ಇದು ಅವುಗಳ ರುಚಿಗ್ರಾಹಕ ಸಾಮಥರ್ಯ್ವನ್ನೇ ಅವಲಂಬಿಸಿದೆ. ಪ್ರಯೋಗಶಾಲೆಯಲ್ಲಿರುವ ಇಲಿಗಳಿಗೆ ಪಿಷ್ಟ, ಜಿಡ್ಡು, ಪ್ರೋಟೀನ್, ವಿಟಮಿನ್ ಮತ್ತು ಲವಣಗಳುಳ್ಳ ಆಹಾರವಷ್ಟನ್ನೂ ಮುಂದಿಟ್ಟರೆ ತಮ್ಮ ಶ್ರಮ, ದಣಿವು ಇತ್ಯಾದಿಗಳನ್ನು ಅವಲಂಬಿಸಿದಂತೆ ತಮಗೆ ಸೂಕ್ತವಾದ ಆಹಾರವನ್ನೇ ಆರಿಸಿಕೊಳ್ಳುತ್ತವೆ. ಅಡ್ರಿನಲ್  ಗ್ರಂಥಿಯನ್ನು ಇಲಿಯಿಂದ ತೆಗೆದರೆ ಅವಲ್ಲಿ ಆಗ ಉಪ್ಪಿನ ಕೊರತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅವು ತಮ್ಮಷ್ಟಕ್ಕೆ ತಾವೇ ಉಪ್ಪನ್ನು ಹೆಚ್ಚಿಗೆ ಸೇರಿಸಿ ಕೊರತೆಯನ್ನು ಹೋಗಲಾಡಿಸಿಕೊಂಡು ಇತರ ಇಲಿಗಳಂತೆಯೇ ಆರೋಗ್ಯವಾಗಿ ಬೆಳೆಯುವುದು ಕಂಡುಬಂದಿದೆ. ಅವುಗಳಲ್ಲಿ ರುಚಿಗ್ರಾಹಕ ನರಗಳನ್ನು ಛೇದಿಸಿ ಅವಕ್ಕೆ ರುಚಿ ತಿಳಿಯದಂತೆ ಮಾಡಿದರೆ ಇದು ಸಾಧ್ಯವಿಲ್ಲ. ಈ ರೀತಿ ಉಪ್ಪಿನ ಕೊರತೆ ಹೋಗಲಾಡಿಸಿಕೊಳ್ಳದಿದ್ದರೆ ಆ ಇಲಿ ಜೀವದಿಂದ ಇರಲಾಗುತ್ತಿರಲಿಲ್ಲ. ಈ ಗುಣ ಮನುಷ್ಯರಲ್ಲೂ ಇದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಅಡ್ರಿನಲ್ ಗ್ರಂಥಿಯು ರೋಗವನ್ನು ಅನುಭವಿಸುತ್ತಿದ್ದ ಮಗು ಒಂದು ತನ್ನ ಉಪ್ಪಿನ ದಾಹವನ್ನು ಶಮನಮಾಡಿಕೊಳ್ಳಲು ಯಥೇಚ್ಛವಾಗಿ ಉಪ್ಪು ತಿನ್ನುತ್ತಿದ್ದುದು ವರದಿಯಾಗಿದೆ. ಅಡ್ರಿನಲ್ ರೋಗವಿರುವ ದೊಡ್ಡವರಲ್ಲೂ ಈ ರೀತಿಯ ಪ್ರತಿಕ್ರಿಯೆ ಉಂಟೇ ಅಂದರೆ ಇಲ್ಲ ಎನ್ನಬೇಕಾಗುತ್ತದೆ, ಏಕೆಂದರೆ ದೊಡ್ಡವರಲ್ಲಿ ಅವರ ಆಹಾರಸೇವನೆಯ ರೂಪರೇಖೆಗಳು ಹುಟ್ಟಿದಂದಿನಿಂದ ಬಂದಿರುವ ಅನುಭವವನ್ನು ಅವಲಂಬಿಸಿರುತ್ತದೆ. ಈ ಸಂದರ್ಭದಲ್ಲಿ ದೇಹದ ಹಿತಾಹಿತಗಳನ್ನು ಗಮನಿಸದೆ ತನಗೆ ಮೊದಲಿನಿಂದ ತಿಂದು ರೂಢಿಯಾಗಿರುವ ಆಹಾರವನ್ನೇ ಸೇವಿಸಲು ಪ್ರೇರೇಪಣೆ ಇರುತ್ತದೆ. ಮಾನವನ ಆಹಾರಾಭ್ಯಾಸಗಳು ಬಹುಮಟ್ಟಿಗೆ ಆತನ ಅಂತಸ್ತು, ಸಂಸ್ಕೃತಿ, ಸಂಪ್ರದಾಯ ಹಾಗೂ ಮನೋಭಾವಗಳನ್ನು ಪ್ರತಿಬಿಂಬಿಸುತ್ತವೆ.

ವಿಷಪದಾರ್ಥಗಳು ಅವುಗಳ ರುಚಿವಿಶೇಷದಿಂದಲೇ ತ್ಯಜಿಸಲ್ಪಡುತ್ತವೆ. ಆದರೆ ಎಲ್ಲ ವಿಷಗಳಿಗೂ ರುಚಿ ಇದ್ದೇ ತೀರಬೇಕೆಂಬ ನಿಯಮವಿಲ್ಲ. ಇಲಿ ಪಾಷಾಣ (ಆಲ್ಫನ್ಯಾಫ್ತೈಲ್ ಥಯೋ ಯೂರಿಯಾ) ಎಂಬ ಅತಿ ವಿಷವಸ್ತುವಿಗೆ ರುಚಿಯೇ ಇಲ್ಲ. ಸೀಸ¯ವಣಗಳು ಅತಿ ವಿಷ. ಆದರೆ ರುಚಿ ಸಿಹಿ. ಹಿಂದೆ ಈ ಲವಣಗಳು ಸಿಹಿರುಚಿಯಾಗಿ ಬಳಸಲ್ಪಟ್ಟು ಅನಾಹುತಗಳಾಗಿ ಅನಂತರ ಅವನ್ನು ಕೈಬಿಟ್ಟ ವರದಿಗಳಿವೆ. ರುಚಿಯೊಂದನ್ನೇ ಪ್ರಧಾನವಾಗಿಟ್ಟುಕೊಂಡು ಪದಾರ್ಥಗಳನ್ನು ಬಳಸುವುದು ಅಪಾಯಕಾರಿ. (ಆರ್.ಎಸ್.ವಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ